ಬೆಳೆವಿಮೆಯಲ್ಲಿ ರೈತರ ಖಾತೆಗೆ ನಿರೀಕ್ಷೆಗಿಂತ ಕಡಿಮೆ ವಿಮಾ ಮೊತ್ತ ಜಮೆ| ಇದನ್ನು ಸರಿಪಡಿಸೋದು ಹೇಗೆ?

ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಿದ ರೈತರ ಖಾತೆಗೆ ಸೋಮವಾರದಿಂದ ಮೊತ್ತ ಜಮೆ ಆಗಲು ಆರಂಭಗೊಂಡಿದೆ. ಈ ನಡುವೆ ನಿರೀಕ್ಷೆಗಿಂತ ಕಡಿಮೆ ಮೊತ್ತ ಜಮೆ ಆಗುತ್ತಿರುವ ಬಗ್ಗೆ ರೈತರು ದೂರಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬೆಳೆ ವಿಮೆ ಪಾವತಿಯಾದ ಲೆಕ್ಕಚಾರದ ಬಗ್ಗೆಯೇ ವ್ಯಾಪಕ ಚರ್ಚೆ ಆರಂಭವಾಗಿದೆ.

Ad Widget ... ..

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಅನ್ವಯವಾಗುವಂತೆ ಬೆಳೆ ವಿಮೆ ಪಾವತಿಸಬಹುದು. ಅಡಿಕೆ ಹೆಕ್ಟರ್‌ಗೆ 6400 ರೂ. ಹಾಗೂ ಕಾಳುಮೆಣಸು ಹೆಕ್ಟರ್‌ಗೆ 2350 ರೂ.ವಿಮಾ ಪ್ರಿಮಿಯಂ ಮೊತ್ತವನ್ನು ಸಹಕಾರಿ ಸಂಘ/ರಾಷ್ಟ್ರೀಯ ಬ್ಯಾಂಕ್‌ ಮೂಲಕ ಸರಕಾರಕ್ಕೆ ಪಾವತಿಸಬೇಕಿತ್ತು. ಬೆಳೆ ವಿಮೆ ಪಾವತಿಸಿದವರಿಗೆ ಹವಾಮಾನ ಆಧಾರಿತವಾಗಿ ವಿಮೆ ಮೊತ್ತ ಪ್ರತಿ ವರ್ಷ ಜಮೆಯಾಗುತ್ತದೆ.

Ad Widget

ಕಡಿಮೆ ಜಮೆ: ಈ ವರ್ಷ ಎಂದಿಗಿಂತ ತಡವಾಗಿ ಬೆಳೆ ವಿಮೆ ಮೊತ್ತ ಜಮೆ ಆಗಿದ್ದು, ಅದರಲ್ಲೂ ಬೆಳೆ ವಿಮೆ ಮೊತ್ತ ನಿರೀಕ್ಷೆಗಿಂತ ಕಡಿಮೆ ಜಮೆ ಆಗುತ್ತಿದೆ ಎಂದು ತಾಲೂಕಿನ ಕೆಲವು ರೈತರು ದೂರಿಕೊಂಡಿದ್ದು, ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳಲ್ಲೂ ಈ ಬಗ್ಗೆ ಪ್ರಶ್ನಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಹೆಚ್ಚಿನವರಿಗೆ ಕಾಳುಮೆಣಸು ಬೆಳೆಯ ಬೆಳೆ ವಿಮೆ ಮೊತ್ತ ಮಾತ್ರ ಜಮೆ ಆಗಿದ್ದು, ಅದೂ ಕೂಡ ವಿಮೆ ಮೊತ್ತ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.

ಅಡಿಕೆ ಮತ್ತು ಕಾಳುಮೆಣಸಿಗೆ ವಿಮೆ ಪಾವತಿಸಿದ್ದರೂ ಇದೀಗ ಎರಡೂ ಬೆಳೆಯ ಮೊತ್ತ ಜಮೆ ಆಗದೇ ಇರುವುದರಿಂದ ಮೊತ್ತ ಹೆಚ್ಚು-ಕಡಿಮೆ ಆಗಿರುವ ಬಗ್ಗೆ ಅಂದಾಜಿಸಲು ಆಗುತ್ತಿಲ್ಲ. ಶೇ.30ರಷ್ಟು ಕಡಿಮೆ ಜಮೆ ಆಗಿರುವ ಬಗ್ಗೆ ರೈತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಈ ಬೆಳೆ ವಿಮೆ ಪಾವತಿ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಕೆಲ ದಿನಗಳವರೆಗೆ ಮೊತ್ತ ಜಮೆ ಮುಂದುವರಿಯಲಿದೆ. ಸುಳ್ಯ ತಾಲೂಕಿನಲ್ಲಿ ಅಂದಾಜು 21 ಸಾವಿರ ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಸುಳ್ಯ ತಾಲೂಕಿನಿಂದಲೇ ಜಿಲ್ಲೆಯ ಅಧಿಕಾರಿಗಳಿಗೆ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ. ಸೋಮವಾರ ದಿನವಿಡೀ ಆಯಾ ರೈತರು ತಮಗೆ ಜಮೆಯಾದ ಮೊತ್ತದಲ್ಲಿ ನಿರೀಕ್ಷಿತ ಮೊತ್ತ ಬಂದಿಲ್ಲ, ಕಡಿಮೆ ಬಂದಿದೆ, ಕೇವಲ ಒಂದು ಬೆಳೆಯ ಹಣ ಮಾತ್ರ ಜಮೆಯಾಗಿದೆ, ನಮ್ಮ ಭಾಗದಲ್ಲಿ ಹೆಚ್ಚಿನವರಿಗೆ ಇದೇ ರೀತಿ ಕಡಿಮೆ ಹಣ ಜಮೆಯಾಗಿದೆ ಎಂಬ ರೀತಿಯಲ್ಲಿ ಹೇಳಿದ್ದಾರೆ.

ರೈತರು ಪರಿಹಾರ ಹೆಚ್ಚಿಸಿಕೊಳ್ಳಲು ಏನು ಮಾಡಬಹುದು?
ಈ ಬಾರಿ ಕರಾವಳಿ, ಮಲೆನಾಡಿನಲ್ಲಿ ಅತ್ಯಧಿಕ ಮಳೆಯಾಗಿದೆ. ಇದರಿಂದ ಅಡಿಕೆ, ಕರಿಮೆಣಸು ಬೆಳೆ ಬಹುತೇಕ ನಾಶವಾಗಿದೆ. ಒಂದು ಅಂದಾಜಿನ ಪ್ರಕಾರ ಅಡಿಕೆ ಬೆಳೆ ಕೊಳೆರೋಗದಿಂದ ಶೇ.80 ರಿಂದ 90ರಷ್ಟು ನಾಶವಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ ಈ ಬಾರಿ ಬೆಳೆವಿಮೆ ಹೆಚ್ಚಿನ ಮೊತ್ತದಲ್ಲಿ ಜಮೆಯಾಗಬಹುದು‌ ಎಂಬ ನಿರೀಕ್ಷೆ ರೈತರಲ್ಲಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ.

ಈಗ ರೈತರ ಬಳಿ ಇರುವ ಕೊನೆಯ ಅವಕಾಶ ಎಂದರೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವುದು. ಈ ಕುರಿತು ಮಾಹಿತಿ ನೀಡಿರುವ ರೈತರೋರ್ವರು ಗ್ರಾಹಕ ನ್ಯಾಯಾಲಯದಲ್ಲಿ ದಾವಾ ದಾಖಲು ಮಾಡಿ ಸರಿಯಾದ ದಾಖಲೆಗಳನ್ನು ನೀಡದಲ್ಲಿ ಬೆಳೆವಿಮೆಯ ಉಳಿದ ಮೊತ್ತವನ್ನು ರೈತರು ಪಡೆಯಲು ಸಾಧ್ಯವಿದೆ ಎಂದಿದ್ದಾರೆ. ರೈತರು ಅಥವಾ ಸ್ಥಳೀಯ ಸಹಕಾರಿ ಸಂಘಗಳು ಈ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಹೆಚ್ಚಿನ ಪರಿಹಾರ ಮೊತ್ತವನ್ನು ನೀಡಲು ಆಗ್ರಹಿಸಬಹುದು. ಈ ಕ್ರಮಕ್ಕೆ ಕೇವಲ ಒಂದು ತಿಂಗಳ ಅವಕಾಶವಿದೆ. ಅದಾದ ಬಳಿಕ ವಿಮಾ ಕಂಪೆನಿ ಕಳೆದ ಸಾಲಿನ ಕಡತಗಳನ್ನು ಮುಚ್ಚಲಿದ್ದು, ಬಳಿಕ ರೈತರಿಗೆ ವಿಮಾ ಪರಿಹಾರದ ಬಗ್ಗೆ ಮಾತನಾಡಲು ಅವಕಾಶವಿಲ್ಲ. ಈ ಕುರಿತು ಸ್ಥಳೀಯ ‌ಸಂಘ ಸಂಸ್ಥೆಗಳು, ಹಾಗೂ ಕೃಪಿ, ತೋಟಕಾರಿಕೆ ಇಲಾಖೆಗಳು ಕ್ರಮ ಕೈಗೊಳ್ಳುವುದು ಅನಿವಾರ್ಯ.

Leave a Comment

Your email address will not be published. Required fields are marked *