ಸಮಗ್ರ ನ್ಯೂಸ್: ಮಲಕ್ಕಾ ಮತ್ತು ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಲಕೊಲ್ಲಿ ಮತ್ತು ಶ್ರೀಲಂಕಾದಲ್ಲಿ ನಿಮ್ನ ಒತ್ತಡ ನಿರ್ಮಾಣಗೊಂಡಿದ್ದು, ಪಶ್ಚಿಮ ವಾಯುವ್ಯ ದಿಕ್ಕಿನತ್ತ ಸಾಗುತ್ತಿದೆ. ನ. 24ರಂದು ಇದರ ತೀವ್ರತೆ ಇನ್ನಷ್ಟು ಹೆಚ್ಚಾಗಿ ಮುಂದಿನ 48 ಗಂಟೆಗಳಲ್ಲಿ ಇದು ಚಂಡಮಾರುತವಾಗಿ ಪರಿವರ್ತನೆ ಯಾಗುವ ಸಾಧ್ಯತೆ ಇದೆ.
ನಿಮ್ನ ಒತ್ತಡದ ಪರಿಣಾಮ ಮತ್ತು ಹಿಂಗಾರು ಕಾರಣದಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಶನಿವಾರ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿತ್ತು. ರವಿವಾರವೂ ಮಳೆ ಗಾಳಿ, ಗುಡುಗು ಸಹಿತ ಉತ್ತಮ ಮಳೆ ಮುಂದುವರಿದಿತ್ತು. ಮಂಗಳೂರು ನಗರದಲ್ಲಿ ರಾತ್ರಿ 8 ಗಂಟೆಗೆ ಗಾಳಿ, ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಕೆಲವು ಕಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಬೆಳ್ತಂಗಡಿ, ಗುರುವಾಯನಕೆರೆ, ಉಜಿರೆ, ಧರ್ಮಸ್ಥಳ, ಸವಣಾಲು, ಕಡಿರುದ್ಯಾವರ, ಬಳಂಜ, ಮುಂಡಾಜೆ, ಕಡಬ, ಸಿರಿಬಾಗಿಲು, ಬಜಪೆ, ಕಟೀಲು, ಮೂಲ್ಕಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ. ರವಿವಾರ ರಾತ್ರಿ ವೇಳೆ ಹಲವು ಕಡೆ ಶುಭ ಕಾರ್ಯಕ್ರಮ ಇದ್ದ ಕಾರಣ ಮಳೆಯಿಂದಾಗಿ ಸಮಸ್ಯೆ ಉಂಟಾಯಿತು.
ಶನಿವಾರ ತಡರಾತ್ರಿ ಉಡುಪಿ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ. ರವಿವಾರ ಮೋಡ ಮತ್ತು ಗುಡುಗು ಇತ್ತಾದರೂ ಮಳೆ ಸುರಿದಿಲ್ಲ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಾಳಿ, ಮಳೆ ಮುಂದುವರಿಯುವ ಸಾಧ್ಯತೆ ಇದೆ.






