ಸಮಗ್ರ ನ್ಯೂಸ್: ಕರ್ನಾಟಕ ಸರ್ಕಾರವು ನಾಯಿ ಕಡಿತದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಬೀದಿ ನಾಯಿ ಕಡಿತದಿಂದ ವ್ಯಕ್ತಿ ಮೃತಪಟ್ಟರೆ 5 ಲಕ್ಷ ಪರಿಹಾರ ನೀಡಲಾಗುತ್ತದೆ, ಬೀದಿ ನಾಯಿ ಕಚ್ಚಿ ಗಾಯವಾದರೆ 5 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈಗಾಗಲೇ 3,500 ಗಾಯಾಳುಗಳಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ನಿಯಮ ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಅನ್ವಯ ಆಗಲಿದೆ. ಬೀದಿ ನಾಯಿ ದಾಳಿಗೆ ಒಳಗಾದ ಸಂತ್ರಸ್ತರಿಗೆ ಮಾತ್ರ ಪರಿಹಾರ ದೊರಕಲಿದೆ.
ನಿರ್ದಿಷ್ಟ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜಿಬಿಎ ಪಶುಪಾಲನಾ ವಿಭಾಗಕ್ಕೆ ಸಲ್ಲಿಸಬೇಕು. ಅರ್ಜಿಯಲ್ಲಿ ಹೆಸರು, ವಯಸ್ಸು, ಫೋಟೋ, ವಿಳಾಸ, ನಾಯಿ ದಾಳಿ ನಡೆದ ಸ್ಥಳ, ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ದಾಖಲೆಗಳ ವಿವರವನ್ನು ನಿಗದಿತ ಅವಧಿಯಲ್ಲಿ ನೀಡಬೇಕು. ಬಳಿಕ ಪಶುಪಾಲನಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ. ಅರ್ಜಿಯು ಜಿಬಿಎ ವೆಬ್‌ಸೈಟ್‌ನಲ್ಲಿ ಸಿಗುತ್ತದೆ.
ಈ ಹಿಂದೆ ಇದ್ದ ಆದೇಶವನ್ನ ನಗರಾಭಿವೃದ್ಧಿ ಇಲಾಖೆ ತಿದ್ದುಪಡಿ ಮಾಡಿ ಹೊಸ ಆದೇಶವನ್ನು ಹೊರಡಿಸಿದೆ. ಈ ಹಿಂದೆ ನಾಯಿ ಕಡಿತದಿಂದ ತರಚಿದ ಗಾಯವಾದರೆ ಪ್ರತಿ ಗಾಯಕ್ಕೆ 2 ಸಾವಿರ, ಆಳವಾದ ಗಾಯವಾದ ಗಾಯಕ್ಕೆ 3 ಸಾವಿರ, ಗಾಯಗಳ ಸಂಖ್ಯೆ ಹೆಚ್ಚಾಗಿದ್ದರೆ 10 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಬಿಬಿಎಂಪಿಯೇ ಚಿಕಿತ್ಸಾ ವೆಚ್ಚ ಭರಿಸುತ್ತಿತ್ತು. ನಾಯಿ ಕಚ್ಚಿ ಮಕ್ಕಳು ಅಸುನೀಗಿದರೆ 50 ಸಾವಿರ ಹಾಗೂ ವ್ಯಕ್ತಿ ಸಾವನಪ್ಪಿದರೆ 1 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಆದರೆ, ಈಗ ಆ ಮೊತ್ತವನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.







