ಸಮಗ್ರ ನ್ಯೂಸ್: ಧರ್ಮಸ್ಥಳದ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗೆ ಆಗ್ರಹಿಸಿದ್ದಕ್ಕೆ ನನ್ನನ್ನು ಎಡಪಂಥೀಯಳು ಎಂದು ಜರಿಯಲಾಗುತ್ತಿದೆ. ಅಲ್ಲಿ ಅನ್ಯಾಯವಾಗಿ ಪ್ರಾಣ ಬಿಟ್ಟವರು ಹಿಂದೂ ಹೆಣ್ಣುಮಕ್ಕಳೇ ಎಂಬುದು ನೆನಪಿರಲಿ. ಹೆಣ್ಣಿಗೆ ನ್ಯಾಯ ಕೇಳುವುದು ತಪ್ಪೇ? ನನ್ನ ಜಾತಿ, ಮತ, ಪಂಥ ಎಲ್ಲವೂ ಹೆಣ್ಣು ಮಾತ್ರ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ತಮ್ಮನ್ನು ಟೀಕಿಸಿದ ಮಾಧ್ಯಮಗಳು ಮತ್ತು ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಹಲವು ವರ್ಷಗಳಿಂದ ಸರಣಿ ಕೊಲೆ ಮತ್ತು ಅತ್ಯಾಚಾರಗಳು ನಡೆದಿವೆ ಎಂದು ಆರೋಪಿಸಿ ಚಿನ್ನಯ್ಯ ಎಂಬುವವರು ನೀಡಿದ ದೂರಿನ ಅನ್ವಯ, ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು. ಈ ತನಿಖೆ ಅಂತಿಮ ಹಂತ ತಲುಪಿ, ನವೆಂಬರ್ ಮೊದಲ ವಾರದಲ್ಲಿ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇತ್ತು. ಆದರೆ, ಅನಿರೀಕ್ಷಿತವಾಗಿ ಹೈಕೋರ್ಟ್ ಈ ತನಿಖೆಗೆ ತಡೆಯಾಜ್ಞೆ ನೀಡಿತ್ತು.
ಹೈಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ಕೇವಲ ಚಿನ್ನಯ್ಯ ಅವರ ಹೇಳಿಕೆಯನ್ನಷ್ಟೇ ಆಧರಿಸದೆ, ಪ್ರಕರಣದ ಕುರಿತು ಸಮಗ್ರ ಮತ್ತು ವಿಸ್ತೃತ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಸಂತ್ರಸ್ತ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕಾದರೆ ತನಿಖೆಯ ವ್ಯಾಪ್ತಿ ಹೆಚ್ಚಾಗಬೇಕು ಎನ್ನುವುದು ಅವರ ಕಾಳಜಿಯಾಗಿತ್ತು.
ಆದರೆ, ನಾಗಲಕ್ಷ್ಮಿ ಅವರ ಈ ನಡೆಯನ್ನು ಕೆಲವು ಮಾಧ್ಯಮಗಳು ತೀವ್ರವಾಗಿ ಖಂಡಿಸಿದ್ದವು. ತನಿಖೆ ನಡೆಯಬಾರದು ಎಂಬಂತೆ ಬಿಂಬಿಸಿ, ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳ ಪರ ದನಿ ಎತ್ತಿದ್ದನ್ನೇ ಪ್ರಶ್ನಿಸಿ ವರದಿಗಳನ್ನು ಪ್ರಕಟಿಸಿದ್ದವು.
ಈ ಎಲ್ಲಾ ಟೀಕೆಗಳಿಗೆ ಇದೀಗ ಸ್ವತಃ ನಾಗಲಕ್ಷ್ಮಿ ಚೌಧರಿ ಅವರೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ಧರ್ಮಸ್ಥಳದ ಬಗ್ಗೆ ದನಿ ಎತ್ತಿದ್ದಕ್ಕೆ ನನ್ನನ್ನು ಎಡಪಂಥೀಯಳು ಎಂದು ಕರೆಯುತ್ತಿದ್ದಾರೆ. ನಾನೇಕೆ ಎಡಪಂಥೀಯಳಾಗಲಿ? ಒಂದು ಹೆಣ್ಣಿಗೆ ಯಾವುದೇ ಎಡ ಇರಲ್ಲ, ಬಲ ಇರಲ್ಲ. ನೀವು ನನ್ನನ್ನು ಕೇಳಿದರೆ ನನ್ನ ಜಾತಿ, ಮತ ಹಾಗೂ ಧರ್ಮ ಎಲ್ಲವೂ ಹೆಣ್ಣೇ ಎಂದು ಹೇಳುತ್ತೇನೆ. ಅಲ್ಲಿ ಸತ್ತವರು ಯಾರು? ಹಿಂದೂ ಹೆಣ್ಣುಮಕ್ಕಳೇ. ಅವರ ಪರ ನಾನು ದನಿ ಎತ್ತಬಾರದಾ? ಹಾಗೆ ದನಿ ಎತ್ತಿದ ಕೂಡಲೇ ನಾನು ಎಡಪಂಥೀಯಳಾಗಿಬಿಡುತ್ತೀನಾ?’ ಎಂದು ಪ್ರಶ್ನಿಸಿದ್ದಾರೆ.
‘ನಾನು ಎಡಪಂಥೀಯಳೂ ಅಲ್ಲ, ಬಲಪಂಥೀಯಳೂ ಅಲ್ಲ, ನಾನು ಬರೀ ಹೆಣ್ಣು ಅಷ್ಟೇ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾನು ಈ ಕುರ್ಚಿಯಲ್ಲಿ ಇರುವ ತನಕ ಧರ್ಮದ ಪರ, ಆ ಹೆಣ್ಣಿನ ಪರ ನಾನು ಯಾವಾಗಲೂ ನಿಂತುಕೊಳ್ಳುತ್ತೇನೆ. ನನ್ನ ಹುದ್ದೆಗೆ ಯಾವುದೇ ಜಾತಿ, ಮತ, ಧರ್ಮ, ಪಂಥ ಇಲ್ಲ. ಬ್ರಾಹ್ಮಣರ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಆಗುವುದಿಲ್ಲವೇ? ದಲಿತರ ಮಕ್ಕಳ ಮೇಲೆ ಆಗಲ್ವಾ? ದೌರ್ಜನ್ಯ ಆದವರ ಬಳಿ ಹೋಗಿ ನೀವು ಎಡನಾ, ಬಲನಾ ಅಂತ ಕೇಳ್ತಾರಾ? ನನ್ನ ಬಳಿ ಬರುವ ಹೆಣ್ಣುಮಕ್ಕಳನ್ನು ನಾನು ಯಾವ ಪಂಥ ಎಂದು ಕೇಳಲು ಸಾಧ್ಯವೇ? ಹೆಣ್ಣಿಗೆ ಯಾವುದೇ ಪಂಥವಿಲ್ಲ, ಯಾವ ಹೆಣ್ಣಿನ ಮೇಲೆ ಆದರೂ ಅದು ದೌರ್ಜನ್ಯವೇ,’ ಎಂದು ಗುಡುಗಿದ್ದಾರೆ.







