ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ| ಸಾಯಲು ಹೊರಟಿದ್ದ ಕುಟುಂಬ ಬಚಾವ್| ವೈರಲ್ ಆಗಿತ್ತು‌ ‘ಸಾಯೋದು ಬೇಡಪ್ಪಾ’ ಎಂದ ಮಗುವಿನ ಮಾತು!!

ಸಮಗ್ರ ನ್ಯೂಸ್: ಸಂಸಾರದಲ್ಲಿನ ಕಲಹಕ್ಕೆ ಬೇಸತ್ತ ಯುವಕನೊಬ್ಬ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಪಣಂಬೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಕಾವೂರಿನಲ್ಲಿ ಈ ಘಟನೆ ನಡೆದಿದೆ. ಕಾವೂರು ಅಂಬಿಕಾ ನಗರ ನಿವಾಸಿ ರಾಜೇಶ್ (35) ಸಾಯಲು ಹೋಗಿ ಪೊಲೀಸರಿಂದ ರಕ್ಷಿಸಲ್ಪಟ್ಟವನು.

Ad Widget ... ..

ಹೆಂಡತಿ ಜೊತೆ ಜಗಳಕ್ಕೆ ಬೇಸತ್ತ ಪತಿ ರಾಜೇಶ್ ಸೋಮವಾರ ಸಂಜೆ ತನ್ನ ಮಗಳನ್ನು ಕರೆದುಕೊಂಡಿ ತಣ್ಣೀರುಬಾವಿ ಬೀಚ್ ಗೆ ಹೋಗಿದ್ದು ‘ನಾವು ಸಾಯೋಣ ಮಗಳೇ, ಅವಳಿಗೆ ಬೇಕಾದ ರೀತಿ ಇರಲಿ, ನಿನ್ನ ತಾಯಿ ಸರಿ ಇಲ್ಲ. ನಮಗೆ ಯಾರೂ ಬೇಡ’ ಎನ್ನುತ್ತ ನೀರಿನತ್ತ ನಡೆಯುವ ರೀತಿ ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ತುಳುವಿನಲ್ಲಿ ಮಾತನಾಡುತ್ತ ಸಮುದ್ರ ಕಡೆಗೆ ಹೋಗುವುದು ಮಾತ್ರ ಇತ್ತು. ಎಲ್ಲಿಯ ವಿಡಿಯೋ ಅಂತ ಗೊತ್ತಾಗುತ್ತಿರಲಿಲ್ಲ. ಆದರೆ ಸಣ್ಣ ಮಗು ‘ಸಾಯೋದು ಬೇಡಪ್ಪಾ’ ಎನ್ನುತ್ತಿರುವುದು ವಿಡಿಯೋದಲ್ಲಿ ಇದೆ. ಈ ವಿಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗಿದೆ.

Ad Widget

ಈ ವಿಡಿಯೋ ಪಣಂಬೂರು ಪೊಲೀಸರಿಗೆ ತಲುಪಿತ್ತು.‌ ಆದರೆ ವಿಡಿಯೋದಲ್ಲಿ ಅವನ ಮುಖ ಇರಲಿಲ್ಲ. ಕೇವಲ ಸಮುದ್ರದ ನೀರಿನ ಕಡೆಗೆ ನಡೆಯುತ್ತಾ ಹೋಗುವುದು, ಅದರಲ್ಲಿ ತಂದೆ- ಮಗಳ ನೆರಳು ಮಾತ್ರ ಇತ್ತು. ಪಣಂಬೂರು ಬೀಚ್ ಇರಬೇಕೆಂದು ಪೊಲೀಸರು ಕೂಡಲೇ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ತಣ್ಣೀರುಬಾವಿ ಸಮುದ್ರ ತೀರಕ್ಕೆ ಪೊಲೀಸ್ ಸಿಬ್ಬಂದಿ ತೆರಳಿ ಅಲ್ಲಿಯೂ ಹುಡುಕಿದ್ದಾರೆ.

ಈ ವೇಳೆ ಮಗುವಿನ ಜೊತೆಗೆ ಒಬ್ಬಾತ ಬಂದಿದ್ದು ಹೌದು ಎನ್ನುವ ಮಾಹಿತಿ ಲಭಿಸಿತ್ತು. ಕೂಡಲೇ ಪೊಲೀಸರು ಯುವಕನ ವಿಳಾಸ ಪತ್ತೆ ಹಚ್ಚಿದ್ದಾರೆ. ಕಾವೂರು ಅಂಬಿಕಾ ನಗರ ಎಂದು ತಿಳಿದು ಬಂದಿದೆ. ಕೂಡಲೇ ಯುವಕನ ವಿಳಾಸಕ್ಕೆ ತೆರಳಿದ ಪೊಲೀಸರು, ಮನೆಯ ಒಳಗೆ ತೆರಳಿದಾಗ ರಾಜೇಶ್ ಪಕ್ಕಾಸಿಗೆ ನೇಣು ಹಗ್ಗ ಹಾಕಿ ಮಗಳ ಜೊತೆಗೆ ನೇಣಿಗೆ ಶರಣಾಗಲು ರೆಡಿಯಾಗಿದ್ದ. ಪೊಲೀಸರು ಕೂಡಲೇ ಆತನನ್ನು ಹಿಡಿದುಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಸಾಯುತ್ತಿದ್ದ ತಂದೆ- ಮಗಳನ್ನು ರಕ್ಷಣೆ ಮಾಡಿದ್ದಾರೆ. ಎರಡು ನಿಮಿಷ ತಡವಾದರೂ ಪ್ರಾಣ ಹೋಗುತ್ತಿತ್ತು.

ಪೊಲೀಸರ ಸಮಯ ಪ್ರಜ್ಞೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಪುಟಾಣಿ ಮಗು ಮತ್ತು ಆಕೆಯ ಅಪ್ಪನ ಜೀವ ಉಳಿದಿದೆ. ಪೊಲೀಸರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *