ಸಮಗ್ರ ನ್ಯೂಸ್: ದೀಪಾವಳಿ ಸಂಭ್ರಮದಲ್ಲಿರುವ ಕರ್ನಾಟಕ ಮಂದಿಗೆ ಮಳೆರಾಯ ಅಡ್ಡಿಯಾಗಿದ್ದಾನೆ. ರಾಜ್ಯದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ರಾಜ್ಯಕ್ಕೆ ಮಳೆ ಅಲರ್ಟ್ ನೀಡಿದೆ. ಬೆಂಗಳೂರು ಸೇರಿದಂತೆ 23 ಜಿಲ್ಲೆಗಳಿಗೆ ಇಂದು ಹಾಗೂ ನಾಳೆ ಯೆಲ್ಲೋ ಅಲರ್ಟ್ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು ಇದರ ಪರಿಣಾಮ ರಾಜ್ಯದ ಚಾಮರಾಜನಗರ, ಕೊಡಗು, ಮಂಡ್ಯ, ರಾಮನಗರ, ಉತ್ತರಕನ್ನಡ, ಮಂಗಳೂರು, ಉಡುಪಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಳ ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಚುರುಕುಗೊಂಡಿದೆ. ಉತ್ತರಕನ್ನಡ, ಉಡುಪಿ, ದ.ಕ ಜಿಲ್ಲೆಗಳ ವಿವಿಧೆಡೆ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗುತ್ತಿದೆ. ಇಂದು ಸಂಜೆ ಆಗುತ್ತಿದ್ದಂತೆ ಮಳೆ ಪ್ರಾರಂಭಗೊಂಡಿದೆ. ದೀಪಾವಳಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರಿಗೂ, ವ್ಯಾಪಾರಸ್ಥರಿಗೂ ಸಮಸ್ಯೆಯಾಗಿದೆ. ಅನಿರೀಕ್ಷಿತವಾಗಿ ಸುರಿದ ಈ ಮಳೆಯಿಂದ ತಾತ್ಕಾಲಿಕವಾಗಿ ವ್ಯಾಪಾರ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತ ರಸ್ತೆಗಳಲ್ಲಿ ನೀರು ತುಂಬಿದ ಕಾರಣ ವಾಹನ ಸವಾರರು ಪರದಾಡಿದರು.







