ಸಮಗ್ರ ನ್ಯೂಸ್: ರೈಲಿಗೆ ತಲೆಕೊಟ್ಟು ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಾರ್ಕಳದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ (48) ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯದ ಮಾಹಿತಿ ಪ್ರಕಾರ ಸುದೀಪ್ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸುದೀಪ್ ತಂದೆ ಹೆಚ್.ಗೋಪಾಲ್ ಭಂಡಾರಿ ಅವರು 1999ರಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ನಂತರ 2008ರಲ್ಲಿಯೂ ಎರಡನೇ ಬಾರಿ ಶಾಸಕರಾಗಿದ್ದಾರೆ. ಹೆಚ್.ಗೋಪಾಲ್ ಭಂಡಾರಿ ಅವರು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಗೋಪಾಲ್ ಭಂಡಾರಿ ಅವರಿಗಿಂತ ಮುಂಚೆ ಈ ಕ್ಷೇತ್ರವನ್ನು ವೀರಪ್ಪ ಮೊಯ್ಲಿ ಪ್ರತಿನಿಧಿಸುತ್ತಿದ್ದರು. ಸದ್ಯ ಬಿಜೆಪಿಯ ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.






