ಮಹಿಳಾ ವಿಶ್ವಕಪ್| ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಸಮಗ್ರ ನ್ಯೂಸ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಮಂಗಳವಾರ ಶ್ರೀಲಂಕಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ 59 ರನ್‌ಗಳಲ್ಲಿ ಜಯಭೇರಿ ಬಾರಿಸಿತು.

Ad Widget ... ..

ಭಾರತದ ಬ್ಯಾಟಿಂಗ್ ವೇಳೆ ಪದೇ ಪದೇ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ತಲಾ 47 ಓವರ್‌ಗಳಿಗೆ ಇಳಿಸಲಾಯಿತು. ಆರಂಭಿಕದ ವೈಫಲ್ಯದ ಹೊರತಾಗಿಯೂ ತಂಡ 47 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 269 ರನ್ ಕಲೆಹಾಕಿತು. ಸ್ಮೃತಿ ಮಂಧನಾ(8) ವಿಫಲವಾಗಿದ್ದರಿಂದ ತಂಡ 25 ಓವರ್‌ಗಳಲ್ಲಿ 120 ರನ್ ಗಳಿಸಿತ್ತು. ಹರ್ಲಿನ್ ಡಿಯೋಲ್ 48 ರನ್ ಸಿಡಿಸಿದರು. ಆದರೆ 26ನೇ ಓವರ್‌ನಲ್ಲಿ ಇನೋಕಾ ರಣವೀರ ಮೂರು ವಿಕೆಟ್ ಕಿತ್ತು ಭಾರತಕ್ಕೆ ಆಘಾತ ನೀಡಿದರು.

Ad Widget

ಮುಂದಿನ ಓವರ್‌ನಲ್ಲಿ ರಿಚಾ ಘೋಷ್ ಕೂಡಾ ಔಟಾದರು. ತಂಡ 4 ರನ್ ಅಂತರದಲ್ಲಿ 4 ವಿಕೆಟ್ ನಷ್ಟಕ್ಕೊಳಗಾಯಿತು. ಆದರೆ ದೀಪ್ತಿ ಶರ್ಮಾ(53 ಎಸೆತಕ್ಕೆ 53) ಹಾಗೂ ಅಮನ್‌ಜೋತ್ ಕೌರ್ (57) 7ನೇ ವಿಕೆಟ್ ಗೆ 103 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಬಳಿಕ ಸ್ನೇಹ ರಾಣಾ 15 ಎಸೆತಗಳಲ್ಲಿ ಔಟಾಗದೆ 28 ರನ್ ಸಿಡಿಸಿ, ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು. ರಣವೀರ 4 ವಿಕೆಟ್ ಕಿತ್ತರು.

ಡಿಎಲ್‌ಎಸ್ ನಿಯಮದನ್ವಯ ಲಂಕಾ 47 ಓವರ್‌ಗಳಲ್ಲಿ 271 ರನ್‌ ಪರಿಷ್ಕೃತ ಗುರಿ ಪಡೆಯಿತು. ಆದರೆ ತಂಡ 45.4 ಓವರ್‌ಗಳಲ್ಲಿ 211 ರನ್‌ಗೆ ಆಲೌಟಾಯಿತು. ನಾಯಕಿ ಚಾಮರಿ ಅಟ್ಟಪಟ್ಟು (43) ಹಾಗೂ ನೀಲಾಕ್ಷಿಡೆ ಸಿಲ್ವ(35) ಹೋರಾಟ ವ್ಯರ್ಥವಾಯಿತು.

ಶ್ರೀಲಂಕಾ ಮಹಿಳಾ ತಂಡದ 9 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾದರು. ಹೀಗಿದ್ದೂ ಭಾರತ ಎದುರು ಸೋಲು ತಪ್ಪಿಸಿಕೊಳ್ಳಲು ಲಂಕಾ ಪಡೆಗೆ ಸಾಧ್ಯವಾಗಲಿಲ್ಲ. ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಮೊದಲು 2017ರಲ್ಲಿ ಬ್ರಿಸ್ಟಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ 9 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಿದ್ದರು.

Leave a Comment

Your email address will not be published. Required fields are marked *