ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್ಗಳಿಂದ ಮಣಿಸಿದ ಟೀಂ ಇಂಡಿಯಾ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಅತ್ತ ದುಬೈನಲ್ಲಿ
ಟೀಂ ಇಂಡಿಯಾ, ಪಾಕಿಸ್ತಾನವನ್ನು ಮಣಿಸುತ್ತಿದ್ದಂತೆ, ಇತ್ತ ಭಾರತದ ಪ್ರಧಾನಿ ನರೇಂದ್ರ ಮೋದಿ, ಟೀಂ ಇಂಡಿಯಾಕ್ಕೆ ತಮ್ಮದೇ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ನಡುವೆ ನಡೆದ ಈ ಏಷ್ಯಾಕಪ್ ಸಾಕಷ್ಟು ವಿವಾದಗಳನ್ನು ಎದುರಿಸಿತು. ಆದಾಗ್ಯೂ, ಎಲ್ಲಾ ವಿವಾದಗಳು ಮತ್ತು ಬಹಿಷ್ಕಾರದ ಕರೆಗಳ ನಡುವೆ, ಟೀಂ ಇಂಡಿಯಾ, ಪಾಕಿಸ್ತಾನವನ್ನು ಒಮ್ಮೆ ಅಲ್ಲ, ಎರಡು ಬಾರಿ ಅಲ್ಲ, ಸತತ ಮೂರು ಬಾರಿ ಸೋಲಿಸಿತು. ಅದರಲ್ಲೂ ಮೊದಲೆರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದ್ದ ಭಾರತ, ಮೂರನೇ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಾಯಿತು.
ಟೀಂ ಇಂಡಿಯಾದ ಗೆಲುವಿನಿಂದ ದೇಶಾದ್ಯಂತ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿವೆ. ಇತ್ತ ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೂರು ಸಾಲುಗಳ ಪೋಸ್ಟ್‌ನೊಂದಿಗೆ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ, ‘ಮೈದಾನದಲ್ಲಿ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ: ಭಾರತಕ್ಕೆ ಜಯ. ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.






