ಸಮಗ್ರ ನ್ಯೂಸ್: ‘ಯಾವ ತಪ್ಪು ಮಾಡದೆ, ಯಾರನ್ನೂ ನೋಯಿಸದೆ ಕರ್ತವ್ಯ ನಿಭಾಯಿಸುತ್ತ ಬಂದಿದ್ದೇನೆ. ನನ್ನ ಮೇಲೆ ಕೆಲವರು ಏಕೆ ದ್ವೇಷ ಕಾರುತ್ತಿದ್ದಾರೆ? ಏಕೆ ನಿಷ್ಠುರವಾಗಿ ವರ್ತಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ’ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಊರ ಜನರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಶ್ರೀ ಮಂಜುನಾಥಸ್ವಾಮಿ ಸನ್ನಿಧಿ ಹಾಗೂ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಅವರು ಮಾತನಾಡಿದರು.
‘ಕೆಲ ವಿಷಯಗಳ ಹಿಂದೆ ಏನೆಲ್ಲ ಇದೆ, ಯಾಕೆ ಏಕೆ ಇದೆ ಎಂಬುದು ತಿಳಿದಿದೆ. ಆದರೆ ಕೋಪ ಯಾಕೆ ಎಂಬುದು ತಿಳಿದಿಲ್ಲ. ಬೆಂಬಿಡದೆ ಕಾಡುವ ಬೇತಾಳನಂತೆ ಅಪಚಾರಗಳು ಬಂದಾಗ ಊರ ಜನರು, ಕ್ಷೇತ್ರದ ಭಕ್ತರು ತೋರಿದ ಪ್ರೀತಿ, ವಿಶ್ವಾಸ ನನ್ನ ಜೀವಂತವಾಗಿರಿಸಿದೆ’ ಎಂದರು.
‘ಬಹಳ ಮಂದಿ ನಿರಂತರವಾಗಿ ಬೈದರು. ಆದರೆ ಯಾಕೆ ಬೈಯುತ್ತಿದ್ದಾರೆ ಎಂದು ಹೇಳಲೇ ಇಲ್ಲ. ತಪ್ಪು ಮಾಡಲಿಲ್ಲ, ಯಾರನ್ನೂ ಹೀಯಾಳಿಸಿಲ್ಲ ಎಂಬ ಆತ್ಮವಿಶ್ವಾಸ ಮತ್ತು ಊರವರು ಇರಿಸಿದ ನಂಬಿಕೆಯಿಂದ ನಿಶ್ಚಿಂತನಾಗಿದ್ದೇನೆ’ ಎಂದೂ ಹೇಳಿದರು.






