ಸಮಗ್ರ ನ್ಯೂಸ್: ಖೈಬರ್ ಪಖ್ತುಂಖ್ವಾದಲ್ಲಿ ತನ್ನದೇ ಜನರ ಮೇಲೆ ಪಾಕಿಸ್ತಾನ ಬಾಂಬ್ ದಾಳಿ ಮಾಡಿದ್ದಕ್ಕಾಗಿ, ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 60ನೇ ಅಧಿವೇಶನದಲ್ಲಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಕ್ಷಿತಿಜ್ ತ್ಯಾಗಿ, “ಇಸ್ಲಾಮಾಬಾದ್ ತನ್ನ ಜನರನ್ನು ಕೊಲ್ಲುವುದನ್ನು ನಿಲ್ಲಿಸಿ ದೇಶದ ಆರ್ಥಿಕತೆಯನ್ನು ಸುಧಾರಿಸುವ ಪ್ರಯತ್ನ ಆರಂಭಿಸಬೇಕು” ಎಂದು ಕುಹುಕವಾಡಿದ್ದಾರೆ.
“ಪಾಕಿಸ್ತಾನವು ಭಾರತದ ನೆಲದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸುತ್ತಿದೆ. ಇಂತಹ ಸುಳ್ಳು ಆರೋಪಗಳನ್ನು ಮಾಡಲು ಅದು ವಿಶ್ವಸಂಸ್ಥೆಯಂತಹ ಜಾಗತಿಕ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಭಾರತದ ವಿರುದ್ಧ ಆಧಾರರಹಿತ ಮತ್ತು ಪ್ರಚೋದನಕಾರಿ ಆರೋಪಗಳನ್ನು ಮಾಡುವ ಬದಲು, ಪಾಕಿಸ್ತಾನ ತನ್ನ ನೆಲದಲ್ಲಿ ತನ್ನದೇ ಜನರನ್ನು ಭೀಕರವಾಗಿ ಕೊಲ್ಲುವುದನ್ನು ನಿಲ್ಲಿಸಿ ಆರ್ಥಿಕ ಅಭಿವೃದ್ಧಿಯತ್ತ ಗಮನಹರಿಸಬೇಕು” ಎಂದು ಕ್ಷಿತಿಜ್ ತ್ಯಾಗಿ ವ್ಯಂಗ್ಯಭರಿತ ಧಾಟಿಯಲ್ಲಿ ಸಲಹೆ ನೀಡಿದರು.
UNHRC ಅಧಿವೇಶನದ ಕಾರ್ಯಸೂಚಿ ಐಟಂ 4ನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ರಾಯಭಾರಿ, “ಪಾಕಿಸ್ತಾನ ಭಯೋತ್ಪಾದನೆಯನ್ನು ಇಡೀ ವಿಶ್ವಕ್ಕೆ ರಫ್ತು ಮಾಡುತ್ತದೆ. ಪಾಕಿಸ್ತಾನದ ಭಯೋತ್ಪಾದನಾ ಪರ ನೀತಿ ಜಾಗತಿಕ ಶಾಂತಿಗೆ ಅಪಾಯಕಾರಿಯಾಗಿದೆ. ಅದು ವಿಶ್ವಸಂಸ್ಥೆ ನಿಷೇಧಿಸಿರುವ ಭಯೋತ್ಪಾದಕ ಸಂಘಟನೆಗಳಿಗೆ ಮತ್ತು ಅದರ ನಾಯಕರಿಗೆ ಆಶ್ರಯ ನೀಡುತ್ತದೆ” ಎಂದು ಗಂಭೀರ ಆರೋಪ ಮಾಡಿದರು.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತಿರಾ ಕಣಿವೆಯ ಮಾಟ್ರೆ ದಾರಾ ಗ್ರಾಮದಲ್ಲಿ, ಪಾಕಿಸ್ತಾನಿ ವಾಯುಪಡೆಯು ತನ್ನದೇ ಜನರ ಮೇಲೆ ಬಾಂಬ್ ದಾಳಿ ಮಾಡಿದೆ. ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ವಾಯುಪಡೆಯು ಚೀನಾ ನಿರ್ಮಿತ ಜೆ-17 ಫೈಟರ್ ಜೆಟ್ಗಳನ್ನು ಬಳಸಿಕೊಂಡು, 8 ಚೀನೀ ನಿರ್ಮಿತ ಎಲ್ಎಸ್-6 ಬಾಂಬ್ಗಳನ್ನು ದಾರಾ ಗ್ರಾಮದ ಮೇಲೆ ಬೀಳಿಸಿದೆ.
ಈ ದಾಳಿಯ ವಿರುದ್ಧ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿನಾಕಾರಣ ಮುಗ್ಧ ನಾಗರಿಕರನ್ನು ಹತ್ಯೆ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯ ಕೇಳಿಬಂದಿದೆ. ಕಳೆದ ವಾರ ಸ್ವಾತ್ ಕಣಿವೆಯ ಮಿಂಗೋರಾದಲ್ಲಿ ಸಾವಿರಾರು ಜನರು ಸರ್ಕಾರ ಮತ್ತು ಸೇನೆಯ ವಿರುದ್ಧ ಬೀದಿಗಳಿದು ಪ್ರತಿಭಟನೆ ನಡೆಸಿದ್ದರು.







