ಸಮಗ್ರ ನ್ಯೂಸ್: ಲಡಾಖ್‌ಗೆ ರಾಜ್ಯದ ಸ್ಥಾನಮಾನ ಹಾಗೂ ಆರನೇ ಪರಿಚ್ಛೇದದಡಿ ಸೇರಿಸುವಂತೆ ಒತ್ತಾಯಿಸಿ ಲೇಹ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ನಡೆಸುತ್ತಿದ್ದ ಸತ್ಯಾಗ್ರಹ, ಪ್ರತಿಭಟನೆ ಮತ್ತು ಬಂದ್ ಬುಧವಾರ ಹಿಂಸಾಚಾರಕ್ಕೆ ತಿರುಗಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರದ ವೇಳೆ ಸ್ಥಳೀಯ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದರೆ, ಹಲವು ವಾಹನಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ.
ರಾಜ್ಯದ ಬೇಡಿಕೆಗೆ ಸಂಬಂಧಿಸಿದಂತೆ ಅ.6ರಂದು ಲಡಾಖ್‌ನ ಪ್ರತಿನಿಧಿಗಳೊಂದಿಗೆ ಕೇಂದ್ರ ಸರಕಾರದ ಮಾತುಕತೆ ನಡೆಸಲು ಮುಂದಾಗಿರುವಂತೆಯೇ ಈ ಅಹಿತಕರ ಘಟನೆ ಸಂಭವಿಸಿದೆ. ಕಣಿವೆಯಲ್ಲಿ ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದಲು. ರಾಜ್ಯ ಸ್ಥಾನಮಾನ ಹೋರಾಟದ ನೇತೃತ್ವ ವಹಿಸಿರುವ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಎಂಬ ಸಂಘಟನೆಯ ಯುವ ಘಟಕವು ಬುಧವಾರ ಲೇಹ್ ಬಂದ್‌ಗೆ ಕರೆ ನೀಡಿತ್ತು. ಬೆಳಗ್ಗೆಯೇ ಪ್ರತಿಭಟನೆ ಆರಂಭವಾಗಿದ್ದು, ಸಮಯ ಕಳೆದಂತೆ ತೀವ್ರ ಸ್ವರೂಪ ಪಡೆಯಿತು.
ರಸ್ತೆಗಳಲ್ಲೆಲ್ಲ ಬೆಂಕಿ, ಹೊಗೆ ಆವರಿಸಿತು. ಉದ್ರಿಕ್ತರನ್ನು ಚದುರಿಸುವ ಉದ್ದೇಶದಿಂದ ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಈ ಮಧ್ಯೆ ಪರಿಸ್ಥಿತಿ ನಿಯಂತ್ರಣಕ್ಕೆ ಅಧಿಕಾರಿಗಳು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ. ಜತೆಗೆ ಪ್ರಚೋದನಕಾರಿ ಭಾಷಣದ ಆರೋಪದ ಮೇರೆಗೆ ಕಾಂಗ್ರೆಸ್ ಫಂಟ್ಸಾಗ್ ವಿರುದ್ಧ ದೂರು ದಾಖಲಾಗಿದೆ.
ಸೆ.10ರಿಂದಲೇ ಸತ್ಯಾಗ್ರಹ
ಸೆ. 10ರಿಂದ 35 ದಿನಗಳ ಉಪವಾಸ ಆರಂಭಿಸಿದ್ದ 15 ಜನರಲ್ಲಿ ಇಬ್ಬರ ಸ್ಥಿತಿ ಮಂಗಳವಾರ ಸಂಜೆ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಯುವಕರ ನೇತೃತ್ವದಲ್ಲಿ ಹವಾಮಾನ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ 15 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಹಿಂಪಡೆದಿದ್ದಾರೆ. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ನಾನು ಲಡಾಖ್‌ನ ಯುವಕರ ವಿನಂತಿಸುತ್ತೇನೆ. ಏಕೆಂದರೆ ಅದು ನಮ್ಮ ಉದ್ದೇಶಕ್ಕೆ ಹಾನಿಯುಂಟು ಮಾಡುತ್ತದೆ ಮತ್ತು ಪರಿಸ್ಥಿತಿಯ ಮತ್ತಷ್ಟು ಹದಗೆಡಿಸುತ್ತದೆ. ನಾವು ಲಡಾಖ್ ಮತ್ತು ದೇಶದಲ್ಲಿ ಅಸ್ಥಿರತೆ ಬಯಸುವುದಿಲ್ಲ” ಎಂದು ಮುಷ್ಕರದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ತಮ್ಮ ಬೆಂಬಲಿಗರಿಗೆ ವಾಂಗ್‌ಚುಕ್ ಹೇಳಿದರು.
ಬುಧವಾರ ನಡೆದ ಪ್ರತಿಭಟನೆಯನ್ನು ಜೆನ್-ಜಿ ಕ್ರಾಂತಿ ಎಂದು ಬಣ್ಣಿಸಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು, ನಿರುದ್ಯೋಗ ಹಿನ್ನೆಲೆಯಲ್ಲಿ ಯುವಕರು ತಿರುಗಿಬಿದ್ದಿದ್ದಾರೆ. ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಲೇಹ್ ನಗರದಲ್ಲಿ ಉಂಟಾದ ಹಿಂಸಾಚಾರದಿಂದ ದುಃಖವಾಗಿದೆ. ನಿರಶನಕ್ಕೆ ಕುಳಿತಿದ್ದ ಇಬ್ಬರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಬುಧವಾರದ ಪ್ರತಿಭಟನೆಗೆ ಕಾರಣವಾಗಿದೆ. ಸಾವಿರಾರು ಯುವಕರು ಬೀದಿಗಿಳಿದಿದ್ದಾರೆ. ಇಡೀ ಲೇಹ್ ನಗರವೇ ನಮ್ಮ ಬೆಂಬಲಕ್ಕೆ ನಿಂತಿದೆ. ಆದರೆ ಇದು ಸಂಪೂರ್ಣವಾಗಿ ಜೆನ್ ಜಿ ಕ್ರಾಂತಿ ಎಂದು ಟ್ವೀಟ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಯಾಕೆ ಹಿಂಸಾಚಾರ?
ಸೆ. 10ರಿಂದ ನಿರಶನ ನಡೆಸುತ್ತಿದ್ದವರ ಪೈಕಿ ಇಬ್ಬರ ಸ್ಥಿತಿ ಮಂಗಳವಾರ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಾಗಿ ನಿರಶನ ನೇತೃತ್ವ ವಹಿಸಿರುವ ಸಂಘಟನೆಯ ಯುವ ಘಟಕವು ಬುಧವಾರ ಲೇಹ್ ಬಂದ್‌ಗೆ ಕರೆ ನೀಡಿತ್ತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಸಂಘರ್ಷ ನಡೆದು, ಹಿಂಸಾಚಾರ ಸಂಭವಿಸಿತು.
ಪ್ರತಿಭಟನೆಗಳಿಗೆ ನಿಷೇಧ
ಹಿಂಸಾಚಾರದ ಹಿನ್ನೆಲೆಯಲ್ಲಿ ಲೇಹ್ ಜಿಲ್ಲಾಡಳಿತವು ಹೊಸ ಪ್ರಕಟನೆ ಹೊರಡಿಸಿದ್ದು, ಸಂಬಂಧಪಟ್ಟ ಇಲಾಖೆಯಿಂದ ಪೂರ್ವ ಹಾಗೂ ಲಿಖೀತ ಅನುಮತಿ ಪಡೆಯದೇ ಲಡಾಖ್‌ನಲ್ಲಿ ಯಾವುದೇ ಪ್ರತಿಭಟನೆ, ರ್ಯಾಲಿ ಹಮ್ಮಿಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ.







