ಸಮಗ್ರ ನ್ಯೂಸ್: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ 2 ತಲವಾರ್ ಮತ್ತು 1 ಬಂದೂಕು ಪತ್ತೆಯಾದ ಬಗ್ಗೆ ಎಸ್.ಐ.ಟಿ ಅಧಿಕಾರಿ ಸೆಪ್ಟೆಂಬರ್ 16 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಬೆಳ್ತಂಗಡಿ ಪೊಲೀಸರು ಸೆಪ್ಟೆಂಬರ್ 19 ರಂದು ಬೆಳಗ್ಗೆ 6 ಗಂಟೆಗೆ ಉಜಿರೆ ತಿಮರೋಡಿ ನಿವಾಸಕ್ಕೆ ಬಂಧಿಸಲು ತೆರಳಿದಾಗ ಮನೆಯಿಂದ ಮೊದಲೇ ಮಹೇಶ್ ಶೆಟ್ಟಿ ತಿಮರೋಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬುರುಡೆ ಪ್ರಕರಣದ ವಿಚಾರವಾಗಿ ಬೆಳ್ತಂಗಡಿ ಎಸ್‌ಐಟಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಆಗಸ್ಟ್ 26ರಂದು ಶೋಧ ನಡೆಸಿದ್ದರು. ಈ ವೇಳೆ ಅಲ್ಲಿ ಎರಡು ತಲವಾರು, ಒಂದು ಬಂದೂಕು ಸಿಕ್ಕಿತ್ತು. ಅದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
ಬೆಳ್ತಂಗಡಿ ಪೊಲೀಸರು ಸೆಪ್ಟೆಂಬರ್ 18ರಂದು ಉಜಿರೆ ತಿಮರೋಡಿಯವರ ಮನೆಗೆ ಮಹಜರು ನಡೆಸಲು ಹೋಗಿದ್ದರು. ಆದರೆ ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿರಲಿಲ್ಲ. ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಸೆಪ್ಟೆಂಬರ್ 19ರಂದು ಬೆಳಗ್ಗೆ 6ಕ್ಕೆ ಬೆಳ್ತಂಗಡಿ ಪೊಲೀಸರು ಹೋದಾಗ ಕೂಡ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಯಲ್ಲಿ ಯಾರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಸೆಪ್ಟೆಂಬರ್ 21ರಂದು ಹಾಜರಾಗಲು ತಿಮರೋಡಿ ಮನೆಯ ಗೋಡೆಗೆ ನೋಟಿಸ್ ಅನ್ನು ಬೆಳ್ತಂಗಡಿ ಪೊಲೀಸರು ಅಂಟಿಸಿ ತೆರಳಿದ್ದಾರೆ.







