ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬುಧವಾರ 75 ವಸಂತಗಳನ್ನು ಪೂರೈಸಿದ್ದಾರೆ. ಭಾರತೀಯ ಜನತಾ ಪಕ್ಷವು(BJP) ತನ್ನ ಪರಮೋಚ್ಛ ನಾಯಕನ ಜನ್ಮದಿನವನ್ನು ಗುರುತಿಸಲು ಹದಿನೈದು ದಿನಗಳ ಕಾಲ ‘ಸೇವಾ ಪಖ್ವಾಡ’ವನ್ನು ಪ್ರಾರಂಭಿಸಿದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಅಕ್ಟೋಬರ್ 2 ರವರೆಗೆ ದೇಶಾದ್ಯಂತ ಸ್ಥಳೀಯ ಉತ್ಪನ್ನಗಳ ಬಳಕೆಯನ್ನು ಜನರಲ್ಲಿ ಉತ್ತೇಜಿಸಲು ಆರೋಗ್ಯ ಶಿಬಿರಗಳಿಂದ ಹಿಡಿದು ಸ್ವಚ್ಛತಾ ಅಭಿಯಾನ, ಬುದ್ಧಿಜೀವಿಗಳ ಸಭೆ ಮತ್ತು ಮೇಳಗಳವರೆಗೆ ಹಲವಾರು ಪ್ರಚಾರ, ಕಲ್ಯಾಣ, ಅಭಿವೃದ್ಧಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಪೋಷಣೆಯ ಮೇಲೆ ಕೇಂದ್ರೀಕರಿಸುವ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲು ಮೋದಿಯವರೇ ಸ್ವತಃ ಮಧ್ಯಪ್ರದೇಶದ ಧಾರ್‌ಗೆ ಪ್ರಯಾಣಿಸುತ್ತಿದ್ದಾರೆ. ಬುಡಕಟ್ಟು ಜನಸಂಖ್ಯೆಯ ಮೇಲೆ ಕೇಂದ್ರೀಕರಿಸಿದ ಕಾರ್ಯಕ್ರಮ ಸೇರಿದಂತೆ ಹಲವಾರು ಇತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವರು ಚಾಲನೆ ನೀಡಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಸೆ.17ರಿಂದ ಅ.2 (ಗಾಂಧಿ/ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ) ವರೆಗೆ ದೇಶಾದ್ಯಂತ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಅಭಿಯಾನ, ಒಡಿಶಾದಲ್ಲಿ ಗಿಡನೆಡುವ ಅಭಿಯಾನವನ್ನು ಸಹ ಅಲ್ಲಿನ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ.
ಬಿಜೆಪಿ ಯುವಮೋರ್ಚಾ 75 ನಗರಗಳಲ್ಲಿ ‘ನಮೋ ಯುವ ರನ್’ ಹೆಸರಿನಲ್ಲಿ ಮ್ಯಾರಥಾನ್ ಆಯೋಜಿಸಿದ್ದು, ಪ್ರತಿ ಕಡೆ 10000ಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಗುಜರಾತ್ ಸರ್ಕಾರ ಯೋಗ ಅಭಿಯಾನ, ದೆಹಲಿಯಲ್ಲಿ ಸಿಎಂ ರೇಖಾ ಗುಪ್ತಾ ಸರ್ಕಾರ ವಿವಿಧ ಆರೋಗ್ಯ ಯೋಜನೆಗಳನ್ನು ಜನರಿಗೆ ಮುಕ್ತ ಮಾಡಲಿದ್ದಾರೆ. ಬಂಗಾಳದಲ್ಲಿ ವಾರಪೂರ್ತಿ ಮೋದಿ ಅವರ ಜೀವನದ ಕುರಿತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.







