ಸಮಗ್ರ ನ್ಯೂಸ್: ಆಸ್ತಿಗಾಗಿ ಮಲತಾಯಿಯೊಬ್ಬಳು ತನ್ನ 7 ವರ್ಷದ ಮಲಮಗಳು ಶಾನವಿಯನ್ನು 3ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾಳೆ. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ನಂಬಲಾಗಿದ್ದ ಈ ಘಟನೆಯು, ಪಕ್ಕದ ಮನೆಯ ಸಿಸಿಟಿವಿ ದೃಶ್ಯಗಳಿಂದ ಕೊಲೆ ಎಂದು ಬಯಲಾಗಿದೆ.
ಬೀದರ್ ನ ಆದರ್ಶ ಕಾಲೋನಿಯಲ್ಲಿ ಈ ಘಟನೆ ಆಗಸ್ಟ್ 27 ರಂದು ನಡೆದಿತ್ತಾದರೂ, ಅಕ್ಕಪಕ್ಕದ ಮನೆಯವರ ಸಿಸಿಟಿವಿ ದೃಶ್ಯಗಳು ಲಭ್ಯವಾದ ಬಳಿಕ ಕ್ರೂರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಲತಾಯಿ ರಾಧಾಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೃತ ಬಾಲಕಿ ಶಾನವಿ (7) ತಾಯಿ ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಂತರ, ಶಾನವಿ ತಂದೆ ಸಿದ್ಧಾಂತ ಅವರು 2023ರಲ್ಲಿ ರಾಧಾಳನ್ನು ಎರಡನೇ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದ್ದರು. ಇದರಿಂದ ಆಸ್ತಿ ಹಂಚಿಕೆಯಾಗಬಹುದೆಂಬ ಭಯದಿಂದ ರಾಧಾ, ಶಾನವಿಯನ್ನು ತನ್ನ ದಾರಿಯಿಂದ ತೆಗೆದುಹಾಕಲು ನಿರ್ಧರಿಸಿದ್ದಾಳೆ.
ಆಗಸ್ಟ್ 27 ರಂದು, ರಾಧಾ ಆಟ ಆಡಿಸುವ ನೆಪದಲ್ಲಿ ಶಾನವಿಯನ್ನು ಮನೆಯ 3ನೇ ಮಹಡಿಗೆ ಕರೆದೊಯ್ದಿದ್ದಾಳೆ. ಅಲ್ಲಿ, ಕುರ್ಚಿಯ ಮೇಲೆ ಅವಳನ್ನು ನಿಲ್ಲಿಸಿ, ನಂತರ ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಾಳೆ. ಈ ಕೃತ್ಯದ ನಂತರ ಆಕೆ ಏನೂ ಆಗದಂತೆ ಮನೆಗೆ ಹಿಂತಿರುಗಿ ಮಲಗಿದ್ದಳು. ಮಗು ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ನಂಬಿದ್ದರು. ಹಾಗಾಗಿ, ಮಗುವಿನ ತಂದೆ ಸಿದ್ಧಾಂತ ಆಗಸ್ಟ್ 28ರಂದು ಗಾಂಧಿ ಗಂಜ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದೂರು ನೀಡಿದ್ದರು.







