ಸಮಗ್ರ ನ್ಯೂಸ್: ಯುವ ಸಮುದಾಯದ ಪ್ರತಿಭಟನೆ, ಹಿಂಸಾಚಾರದಿಂದಾಗಿ ಅರಾಜಕತೆ ಮನೆ ಮಾಡಿರುವ ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆ ಕುರಿತಂತೆ ಪ್ರಯತ್ನಗಳು ಬುಧವಾರ ನಡೆದಿವೆ. ಇನ್ನೊಂದೆಡೆ, ಘರ್ಷಣೆಯನ್ನು ಹತ್ತಿಕ್ಕುವ ಸಲುವಾಗಿ ನೇಪಾಳ ಸೇನೆಯು ರಾಷ್ಟ್ರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಮಧ್ಯಂತರ ಸರ್ಕಾರ ಮುನ್ನಡೆಸಲು, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹಾಗೂ ವಿದ್ಯುತ್ ಮಂಡಳಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕುಲಮಾನ್ ಘೀಸಿಂಗ್ ಅವರ ಹೆಸರುಗಳನ್ನು ಪ್ರತಿಭಟನೆ ನಡೆಸುತ್ತಿರುವ ಜೆನ್-ಝೀ ಯುವ ಸಮುದಾಯ ಪರಿಗಣಿಸುತ್ತಿದೆ. ಈ ಸಂಬಂಧ ಸಂಘಟನೆಯ ಮುಖಂಡರು ಆನ್‌ಲೈನ್ ಮೂಲಕ ವ್ಯಾಪಕ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ನೇಪಾಲದಲ್ಲಿ ಉಂಟಾಗಿದ್ದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸೇನೆ ಇಡೀ ದೇಶದಲ್ಲಿ ಕರ್ಫ್ಯೂ ವಿಧಿಸಿದ ಬಳಿಕ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದವರನ್ನು ಮಾತುಕತೆಗೆ ಆಹ್ವಾನಿಸಿತು. ಸುಮಾರು 4 ಗಂಟೆಗಳ ಕಾಲ ವರ್ಚುವಲ್ ಆಗಿ ಈ ಸಭೆ ನಡೆದಿದ್ದು, ನಿವೃತ್ತ ನ್ಯಾಯಾಧೀಶೆ ಸುಶೀಲಾ ಕರ್ಕಿ ಅವರನ್ನು ಮಧ್ಯಾಂತರ ಸರಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡುವಂತೆ ಪ್ರತಿಭಟನಕಾರರು ಆಗ್ರಹಿಸಿದರು ಎಂದು ವರದಿಗಳು ತಿಳಿಸಿವೆ. ಈ ಸಭೆಯ ನೇತೃತ್ವವನ್ನು ಮಾಜಿ ಅಧ್ಯಕ್ಷ ಪೌದೆಲ್ ವಹಿಸಿಕೊಂಡಿದ್ದು ವಿಶೇಷವಾಗಿತ್ತು.
ನೇಪಾಲದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿರುವ ಸುಶೀಲಾ ಕರ್ಕಿ ಅವರು ಉತ್ತರ ಪ್ರದೇಶ ಬನಾರಸ್ ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ನೇಪಾಲದ ತ್ರಿಭುವನ್ ವಿ.ವಿ.ಯಿಂದ ಕಾನೂನು ಪದವಿ ಪಡೆದಿರುವ ಅವರು 2009ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅವರು ತಮ್ಮನ್ನು ತಾವು ಭಾರತದ ಸ್ನೇಹಿತೆ ಎಂದು ಹೇಳಿಕೊಳ್ಳುತ್ತಾರೆ. ಮೋದಿ ಹಾಗೂ ಭಾರತೀಯ ನಾಯಕರ ಬಗ್ಗೆ ಅವರಿಗೆ ಒಲವು ಇದೆ.







