ಸಮಗ್ರ ನ್ಯೂಸ್: ಕರ್ನಾಟಕದ ಮಂಡ್ಯದಲ್ಲಿ ಗಣೇಶ ಮೆರವಣಿಗೆ ವೇಳೆ ಕೋಮುಜ್ವಾಲೆಯ ಕಿಡಿ ಹಚ್ಚಿದ್ದರೆ ಅತ್ತ ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಮೆರವಣಿಗೆ ವೇಳೆ ದೇವಾಲಯಕ್ಕೆ ವಿಶೇಷ ಗೌರವ ಸಲ್ಲಿಸಿದ್ದು ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕಾಸರಗೋಡಿನ ಪಾಲಕುನ್ನುವಿನಲ್ಲಿರುವ ಕೊಟ್ಟಿಕುಲಂ ನೂರುಲ್ ಹುದಾ ಮದರಸಾ ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆ ವೇಳೆ ಕಜಕಂ ಭಗವತಿ ದೇವಸ್ಥಾನಕ್ಕೆ ವಿಶೇಷ ಗೌರವ ಸಲ್ಲಿಸಲಾಗಿದೆ.
ಅನಿಶಿತ್ ಎಂಬವರು ಗೌರವ ಸಲ್ಲಿಸುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಕೇರಳ, ಇಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ಮುಸ್ಲಿಮರು ಹಿಂದೂ ದೇವಾಲಯಕ್ಕೆ ವಂದನೆ ಸಲ್ಲಿಸುವುದು, ಧರ್ಮಗಳ ನಡುವೆ ಗೌರವ ಮತ್ತು ಸಾಮರಸ್ಯ ತೋರಿಸುತ್ತದೆ ಎಂದು ಹೇಳಿದ್ದಾರೆ.
ಓಣಂ ಹಬ್ಬ ಮತ್ತು ಈದ್ ಮಿಲಾದ್ ಜೊತೆಜೊತೆಯಲ್ಲೇ ಬಂದಿದ್ದು, ಕೇರಳದ ಹಲವಾರು ಭಾಗಗಳು ಕೋಮು ಸೌಹಾರ್ದತೆಯ ನಿದರ್ಶನಗಳು ಕಂಡುಬಂದಿವೆ.
ಇಂತಹ ಘಟನೆಗಳ ಕುರಿತು, ಇದು ನಿಜವಾದ ಕೇರಳ ಸ್ಟೋರಿ, ಇದು ನಿಜವಾದ ಭಾರತ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.







