ಸಮಗ್ರ ನ್ಯೂಸ್: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಸಜೀಪಮುನ್ನೂರು ಎಂಬಲ್ಲಿ ಗಣೇಶೋತ್ಸವ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವನ್ನು ಪೊಲೀಸರು ಅರ್ಧದಲ್ಲಿಯೇ ನಿಲ್ಲಿಸಿದ ವಿಚಾರ ಈಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂಬ ನಿಯಮವನ್ನು ಮುಂದಿಟ್ಟು ಯಕ್ಷಗಾನ, ನಾಟಕ ಮತ್ತಿತರ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸುವ ಘಟನೆಗಳು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚೆಚ್ಚು ವರದಿಯಾಗುತ್ತಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಅರ್ಧದಲ್ಲಿಯೇ ನಿಲ್ಲಿಸಿದ ಬಗ್ಗೆ ವರದಿಯಾಗಿವೆ.
ಗಣೇಶೋತ್ಸವದ ಪ್ರಯುಕ್ತ ಸಜೀಪಮುನ್ನೂರಿನಲ್ಲಿ ‘ವಿನಾಯಕ ಶಂಕರನಾರಾಯಣ ದುರ್ಗಾಂಬಾ ಯಕ್ಷಗಾನ ತಂಡ ನಂದಾವರ’ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ರಾತ್ರಿ ಹತ್ತು ಗಂಟೆ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸರು ಪ್ರದರ್ಶನವನ್ನು ಮಟಕುಗೊಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
”ಕರ್ನಾಟಕ ಸರ್ಕಾರವು ನೂರಾರು ವರ್ಷಗಳ ಹಳೆಯ ಸಾಂಸ್ಕೃತಿಕ ಕಲೆ ಯಕ್ಷಗಾನವನ್ನು ಮೂಟಕುಗೊಳಿಸುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಡಿಜೆ, ಪಬ್ ಇತ್ಯಾದಿಗಳನ್ನು ತಡರಾತ್ರಿವರೆಗೂ ನಡೆಸಲು ಅವಕಾಶವಿದೆ. ಆದರೆ ಪೊಲೀಸರು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಡೆಯೊಡುತ್ತಿದ್ದಾರೆ. ತುಳುನಾಡು ಪ್ರತ್ಯೇಕ ರಾಜ್ಯವಾಗಬೇಕು ಎಂಬುದಕ್ಕೆ ಇದು ಮತ್ತೊಂದು ಕಾರಣ. ನಮ್ಮ ದೇಶೀ ಸಂಸ್ಕೃತಿ ಮತ್ತು ಭಾಷೆಯನ್ನು ನಾವು ಉಳಿಸಿಕೊಳ್ಳಬೇಕಿದೆ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರ ವಿಜೆ ಎಂಬವರು ಪೋಸ್ಟ್ ಮಾಡಿದ್ದಾರೆ.







