ಬಿ.ಎಲ್ ಸಂತೋಷ್ ವಿರುದ್ದ ಅವಮಾನಕರ ಹೇಳಿಕೆ| ಬಂಧನ ಭೀತಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ

ಸಮಗ್ರ ನ್ಯೂಸ್: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರವರ ಮೇಲೆ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರ ತಂಡವೊಂದು ಗುರುವಾರ ಬೆಳಿಗ್ಗೆ ಬೆಳ್ತಂಗಡಿಗೆ ಆಗಮಿಸಿದೆ.

Ad Widget ... ..

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅವರ ನೇತೃತ್ವದಲ್ಲಿ, ವಿವಿಧ ಗ್ರಾಮಾಂತರ ಪೊಲೀಸ್ ಠಾಣೆಗಳ ಸಬ್ಇನ್ಸ್ಪೆಕ್ಟರ್ಗಳು (ಎಸ್ಐ) ಮತ್ತು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ತಂಡವು ಸುಮಾರು ಆರು ಜೀಪ್ ಗಳಲ್ಲಿ ಬೆಳ್ತಂಗಡಿಗೆ ಬಂದಿಳಿದಿದೆ. ಏಕಾಏಕಿ ನಡೆದ ಈ ಪೊಲೀಸ್ ಕಾರ್ಯಾಚರಣೆಯು ಸ್ಥಳೀಯವಾಗಿ ಕುತೂಹಲದ ವಾತಾವರಣವನ್ನು ಸೃಷ್ಟಿಸಿದೆ.

Ad Widget

ಈಗಾಗಲೇ ಪೊಲೀಸರ ತಂಡ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ಮನೆಗೆ ಧಾವಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನು ಮಹೇಶ್ ಶೆಟ್ಟಿಯವರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕೂಡಾ ತಿಮರೋಡಿಯತ್ತ ಧಾವಿಸುತ್ತಿದ್ದಾರೆ.

ಏನಿದು ಪ್ರಕರಣ?
ಆಗಸ್ಟ್ 16 ರಂದು ಫೇಸ್ಬುಕ್ ಪೇಜ್ನಲ್ಲಿ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಹಿಂಧೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸಿನ ದ್ವೇ಼ಷ ಭಾವನೆಯನ್ನು ಉಂಟು ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.

ಮಹೇಶ ಶೆಟ್ಟಿ ತಿಮರೋಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್ ಅವರು ಈ ದೂರು ನೀಡಿದ್ದರು. ಈ ಹಿನ್ನೆಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಇದೇ ಪ್ರಕರಣದ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *