ಸಮಗ್ರ ನ್ಯೂಸ್: “ಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಇದನ್ನು ಯಾರು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಧರ್ಮಸ್ಥಳದ ಆಡಳಿತ ಮಂಡಳಿ ಮೇಲೆ ಕಪ್ಪು ಚುಕ್ಕೆ ತರಲು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಹಾಗೂ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಶಿವಕುಮಾರ್ ಅವರು ಈ ವಿಚಾರವನ್ನು ಮಾತನಾಡಿದರು.
“ನಾನು ಧರ್ಮಸ್ಥಳ ಕ್ಷೇತ್ರ ಹಾಗೂ ಆ ದೇವಸ್ಥಾನದ ಮೇಲೆ ನಂಬಿಕೆ ಇರುವವನು. ನನಗೆ ಧರ್ಮಾಧಿಕಾರಿಗಳ ಮೇಲೂ ನಂಬಿಕೆ ಇದೆ. ಅವರ ಆಚಾರ ವಿಚಾರಗಳ ಬಗ್ಗೆ ಅರಿವಿದೆ. ಈ ಪ್ರಕರಣದಲ್ಲಿ ಪರಿಸ್ಥಿತಿ ಏನಿದೆ ಎಂದು ಗೃಹ ಸಚಿವರು ವಿವರಣೆ ನೀಡುತ್ತಾರೆ. ನಮಗೆ ಈ ಪ್ರಕರಣದ ವಿಚಾರ ಗೊತ್ತಿದೆ. ಆದರೆ ಸರ್ಕಾರ ಎಸ್‌ಐಟಿ ರಚಿಸಲು ಕಾರಣವೇನು ಎಂಬುದನ್ನು ವಿವರಿಸುತ್ತಾರೆ. ಈ ವಿಚಾರವಾಗಿ ಇಲ್ಲಿ ನಾವು ನಾಲ್ಕು ಜನ ಮಾತನಾಡುವುದಷ್ಟೇ ಅಲ್ಲ. ಲಕ್ಷಾಂತರ ಭಕ್ತಾದಿಗಳು ಈ ಕ್ಷೇತ್ರ ನಂಬಿದ್ದಾರೆ. ದೇಶದಲ್ಲಿ ಅನ್ನ ದಾಸೋಹ ಆರಂಭವಾಗದೇ ಇದ್ದ ಕಾಲದಲ್ಲೇ ಈ ಕ್ಷೇತ್ರದಲ್ಲಿ ಇದನ್ನು ಆರಂಭಿಸಲಾಗಿತ್ತು. ಈ ವಿಚಾರವನ್ನು ನೀವು ರಾಜಕೀಯವಾಗಿ ತಿರುಗಿಸಬೇಡಿ” ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಹೈಕಮಾಂಡ್ ಎಂದು ಎಳೆದು ತರಬೇಡಿ. ಈ ಪ್ರಕರಣದಲ್ಲಿ ಕಾಂಗ್ರೆಸ್ ಯಾಕೆ ಹಸ್ತಕ್ಷೇಪ ಮಾಡುತ್ತದೆ. ಅಲ್ಲಿನ ಆಂತರಿಕ ಸಮಸ್ಯೆಯಿಂದ ಯಾವನೋ ಒಬ್ಬ ಬಂದು ಆರೋಪ ಮಾಡಿದ್ದಾನೆ. ನಿಮಗಿಂತ ಹೆಚ್ಚಾಗಿ ನಮ್ಮ ಪಕ್ಷದಲ್ಲೇ ಶಿವಲಿಂಗೇಗೌಡರು, ಅಶೋಕ್ ರೈ ಸೇರಿದಂತೆ ಅನೇಕ ಶಾಸಕರು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಧ್ವನಿ ಎತ್ತಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ನಂಬಿಕೆ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ನಾಶವಾಗಬಾರದು. ಧರ್ಮಾಧಿಕಾರಿಗಳು ಮೊದಲಿನಿಂದಲೂ ಸಾಮಾಜಿಕ ಸೇವೆ, ಧಾರ್ಮಿಕ ಸೇವೆ ಮಾಡಿಕೊಂಡು ಬರುತ್ತಿದ್ದು, ಅವರ ಮೇಲೆ ನಮಗೆ ಯಾವುದೇ ಅನುಮಾನವಿಲ್ಲ” ಎಂದು ಅವರು ಹೇಳಿದ್ದಾರೆ.







