ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಪಾಂಗಾಳದ ದಿ. ಸೌಜನ್ಯ ಮನೆಯ ಸಮೀಪ ಬಿಗ್‌ಬಾಸ್‌ನ ರಜತ್ ಎಂಬುವವರ ಸಂದರ್ಶನ ಮಾಡುತ್ತಿದ್ದ ನಾಲ್ಕು ಮಂದಿ ಯೂಟ್ಯೂಬ್ ಮಾಧ್ಯಮ ಪ್ರತಿನಿಧಿಗಳ ಮೇಲೆ ಆಗಂತುಕರು ದಾಳಿ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ಸಂಜೆ ವರದಿಯಾಗಿದೆ.
ಕುಡ್ಲ ರ‍್ಯಾಂಪೇಜ್ ಎಂಬ ಹೆಸರಿನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್ ಅವರ ಜೊತೆಗೆ, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರಾಂಪೇಜ್‌ನ ಕ್ಯಾಮೆರಾ ಪರ್ಸನ್ ಮೇಲೆ ದಾಳಿ ಮಾಡಲಾಗಿದೆ. ಕ್ಯಾಮೆರಾವನ್ನು ಪುಡಿ ಮಾಡಿದ್ದಾರೆ ಮತ್ತು ಎಲ್ಲರೂ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು ಒಬ್ಬರಿಗೆ ತೀವ್ರ ಗಾಯಗಳಾಗಿವೆ.
ಸೌಜನ್ಯ ಮನೆಯ ಪಾಂಗಾಳ ಕ್ರಾಸ್ ಸಮೀಪ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ದಾಳಿ ನಡೆಸಿದ ಗುಂಪಿನಲ್ಲಿ ಸುಮಾರು 50ರಿಂದ ನೂರು ಜನ ಇದ್ದರೆಂದು ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಸದ್ಯ ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.





