ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಸತತ 2 ನೇ ದಿನವೂ ಶವಗಳ ಹುಡುಕಾಟ ಮುಂದುವರಿದಿದೆ.
ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ಅನಾಮಿಕ ದೂರುದಾರ, 13 ಸ್ಥಳಗಳನ್ನು ಗುರುತಿಸಿದ ಬೆನ್ನಲ್ಲೇ ಮಂಗಳವಾರದಿಂದ ಶವಗಳನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿದ್ದು ಎಸ್ಐಟಿ ಅಧಿಕಾರಿಗಳ ನೇತ್ರಾವತಿ ದಂಡೆಯ ಆಸುಪಾಸಿನಲ್ಲಿ ಶೋಧಕಾರ್ಯ ಚುರುಕುಗೊಳಿಸಲಾಗಿದೆ.
ಮಂಗಳವಾರ ಸುಮಾರು 6 ತಾಸಿಗೂ ಹೆಚ್ಚು ಕಾಲ ಅಗೆದರೂ ಯಾವುದೇ ರೀತಿಯ ಕುರುಹು ಪತ್ತೆಯಾಗಿಲ್ಲ. ಈ ಬೆನ್ನಲ್ಲೇ ಇವತ್ತು ಅನಾಮಿಕ ತೋರಿಸಿದ 2ನೇ ಜಾಗದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಾಡು ಸಂರಕ್ಷಿತಾ ಪ್ರದೇಶ ಆಗಿರೋದ್ರಿಂದ ಭೂಮಿ ಅಗೆಯೋಕೆ ಅವಕಾಶ ಇಲ್ಲ. ಹೀಗಾಗಿ ಮಾನವನ ಶ್ರಮದಿಂದಲೇ ಭೂಮಿ ಅಗೆದು ತನಿಖೆ ಕೈಗೊಳ್ಳಲಾಗಿದೆ.
ದೂರುದಾರ ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಸ್ಥಳ , ಅಜಿಕುರಿ ರಸ್ತೆ, ಕನ್ಯಾಡಿ, ನೇತ್ರಾವತಿ ನದಿ ಕಿನಾರೆ ಸೇರಿ ಒಟ್ಟು 13 ಸ್ಥಳಗಳನ್ನು ಸೋಮವಾರ ಗುರತಿಸಿದ್ದಾರೆ. ಈ ಸ್ಥಳಗಳಲ್ಲಿ 30 ಕಾರ್ಕಳದ ಎಎನ್ಎಫ್ ಸಿಬ್ಬಂದಿ ರಾತ್ರಿ ಹಗಲು ಪಾಳಿಯಲ್ಲಿ ಬಂದೋಬಸ್ತ್ನಲ್ಲಿ ತೊಡಗಿಕೊಂಡಿದ್ದಾರೆ. ಈ ಸ್ಥಳಗಳಲ್ಲಿ ಅಗೆಯುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಅನಾಮಿಕ ದೂರುದಾರ ತಿಳಿಸಿದಂತೆ ಸೋಮವಾರ 13 ಕಡೆ ಸ್ಥಳ ಮಹಜರು ಮಾಡಿ, ಮಂಗಳವಾರ ನೇತ್ರಾವತಿ ಸ್ನಾನಘಟ್ಟದ ಬಳಿ ಪುತ್ತೂರು ಎಸಿ ಸಮ್ಮುಖದಲ್ಲಿ 6 ತಾಸಿಗೂ ಹೆಚ್ಚು ಕಾಲ ಅಗೆಯುವ ಕಾರ್ಯ ಮಾಡಲಾಗಿತ್ತು. ಈ ಪ್ರಕ್ರಿಯೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಇಬ್ಬರು ನುರಿತ ವೈದ್ಯರೂ ಸಹ ಆಗಮಿಸಿದ್ದರು. ಡಿಐಜಿ ಅನುಚೇತ್, ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸ್ಪಿ ಸೈಮನ್, ಪುತ್ತೂರು ಎಸಿ ಸ್ಟ್ರೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಕಂದಾಯ, ಅರಣ್ಯ, ಎಫ್ಎಸ್ಎಲ್ ಸೋಕೋ ವಿಭಾಗ, ಆಂತರಿಕ ಭದ್ರತಾ ದಳ , ಪೊಲೀಸ್ ತಂಡ ನಿನ್ನೆ 12 ಗಂಟೆಗೆ ಕಾರ್ಯಾಚರಣೆ ಆರಂಭಿಸಿತ್ತು.






