ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮ ವ್ಯಾಪ್ತಿಯ ಹಲವೆಡೆ ಶವಗಳನ್ನು ಹೂತಿರುವುದಾಗಿ ಅನಾಮಿಕ ಹೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಎಸ್.ಐ.ಟಿ. (ವಿಶೇಷ ತನಿಖಾ ದಳ) ಅಧಿಕಾರಿಗಳ ಮುಂದೆ ಹಾಜರಾದ ಅನಾಮಿಕ ವ್ಯಕ್ತಿ, 13 ಸ್ಥಳಗಳನ್ನು ಗುರುತಿಸಿದಂತೆ ಸ್ಥಳ ಮಹಜರು ನಡೆಸಲಾಗಿದೆ.
ಜು.27 ರಂದು ಮಂಗಳೂರಿನಲ್ಲಿ ಅನಾಮಿಕನ ಸಂಪೂರ್ಣ ಹೇಳಿಕೆ ಪಡೆದು ಪ್ರಕರಣವನ್ನು ಚುರುಕುಗೊಳಿಸಿದ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸಿ.ಎ.ಸೈಮನ್ ಹಾಗೂ ಅಧಿಕಾರಿಗಳ ತಂಡವು ಬೆಳಗ್ಗೆಯೇ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಎಸ್.ಐ.ಟಿ. ಕಚೇರಿಗೆ ಆಗಮಿಸಿದ್ದರು. ಅನಾಮಿಕ ತನ್ನ ಪರ ನ್ಯಾಯವಾದಿಗಳ ತಂಡದೊಂದಿಗೆ ಬೆಳಗ್ಗೆ 11ಕ್ಕೆ ಅಧಿಕಾರಿಗಳ ಮುಂದೆ ಹಾಜರಾದ. ಕೆಲವು ತಾಸಿನ ವಿಚಾರಣೆ ಬಳಿಕ ದಾಖಲೆ ಪತ್ರದೊಂದಿಗೆ ಬಿಗಿ ಭದ್ರತೆಯಲ್ಲಿ ಮಧ್ಯಾಹ್ನ 1ಕ್ಕೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಕರೆತರಲಾಯಿತು.
ದೂರುದಾರ ತಲೆ ಬುರುಡೆಯೊಂದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ. ಎಲ್ಲರೂ ಅದೇ ಸ್ಥಳದ ಮಹಜರು ಅಂದುಕೊಂಡಿದ್ದಾಗಲೇ, ನೇತ್ರಾವತಿ ಸ್ನಾನಘಟ್ಟಕ್ಕೆ ತಾಗಿಕೊಂಡು ಇರುವಂತೆ ಕೆಳಭಾಗದ ಅರಣ್ಯ ಇಲಾಖೆಗೆ ಸೇರಿದ ಪ್ರದೇಶಕ್ಕೆ ಅಧಿಕಾರಿಗಳನ್ನು ಕರೆದೊಯ್ದ ಅನಾಮಿಕ, 8 ಪ್ರದೇಶಗಳನ್ನು ಗುರುತಿಸಿದ. ಹೂತಿಟ್ಟ ಸ್ಥಳವನ್ನು ಕಾರ್ಡೆನಿಂಗ್ ಟೇಪ್ ಬಳಸಿ ಗುರುತಿಸಲಾಯಿತು.
ಮಧ್ಯಾಹ್ನದ ಬಳಿಕ 5 ಸ್ಥಳ ಗುರುತಿಸಲಾಯಿತು. ಸಂಜೆ 4.30 ಕ್ಕೆ ನೇತ್ರಾವತಿ ಸೇತುವೆಯಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆಯ ಅಂಚಿನಲ್ಲೇ ಮೂರು ಸ್ಥಳ ಗುರುತಿಸಿರುವುದು ಅಚ್ಚರಿಗೆ ಕಾರಣವಾಯಿತು. ನೂರಾರು ಮಂದಿ ರಸ್ತೆಯಲ್ಲಿ ನಿಂತು ಕುತೂಹಲದಿಂದ ವೀಕ್ಷಿಸುತ್ತಿದ್ದ ಕಾರಣ ಹೆದ್ದಾರಿಯಲ್ಲಿ ಕೆಲಹೊತ್ತು ತಡೆ ಉಂಟಾಯಿತು.
ಅಜಿಕುರಿ ರಸ್ತೆಯಲ್ಲಿ ಗುರುತು:
ಸಂಜೆ ನೇತ್ರಾವತಿ ಅಜಿಕುರಿ ರಸ್ತೆಯಲ್ಲಿ ಕಿಂಡಿ ಅಣೆಕಟ್ಟಿಗೆ ತಾಗಿಕೊಂಡಂತೆ ಸುಮಾರು 5 ಸೆಂಟ್ಸ್ ಸ್ಥಳವನ್ನು ಗುರುತಿಸುವ ಮೂಲಕ ಒಟ್ಟು 13 ಸ್ಥಳಗಳನ್ನು ಒಂದು ದಿನದಲ್ಲಿ ಮಹಜರು ನಡೆಸಲಾಯಿತು.
ಸ್ಥಳ ಮಹಜರಿಗೆ ಡ್ರೋನ್ ಬಳಕೆ:
ಅಜಿಕುರಿ ರಸ್ತೆಯಲ್ಲಿ 5 ಸೆಂಟ್ಸ್ ವ್ಯಾಪ್ತಿಯಲ್ಲಿ ಅನಾಮಿಕ ಗುರುತಿಸಿದ ಸ್ಥಳವನ್ನು ಎ.ಎನ್.ಎಫ್. (ನಕ್ಸಲ್ ನಿಗ್ರಹ ಪಡೆ) ತಂಡದ ಸಹಕಾರದೊಂದಿಗೆ ಡ್ರೋನ್ ಮೂಲಕ ಸ್ಥಳ ಮಹಜರು ಮಾಡಿ ಪ್ರದೇಶದ ಚಿತ್ರ ಹಾಗೂ ವೀಡಿಯೋ ಚಿತ್ರೀಕರಣದ ಮೂಲಕ ದಾಖಲಿಸಲಾಯಿತು. ಸಂಜೆ 5.40ರ ಸುಮಾರಿಗೆ ಅಂತಿಮವಾಗಿ ಕನ್ಯಾಡಿಯ ಖಾಸಗಿ ಜಾಗವೊಂದಕ್ಕೆ ಅನಾಮಿಕ ಸ್ಥಳ ಮಹಜರಿಗೆ ಕರೆದೊಯ್ದಿದ್ದು, ಇಲ್ಲಿ ನೇತ್ರಾವತಿ ಕಿನಾರೆಯ ಮತ್ತೂಂದು ಪ್ರದೇಶಕ್ಕೆ ತೆರಳಲಾಯಿತು. ಸಂಜೆಯಾದ ಕಾರಣ ಸ್ಥಳ ವೀಕ್ಷಿಸಿದ್ದು, ಮಹಜರು ಆಗಬೇಕಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ 13 ಸ್ಥಳಗಳಿಗೆ ಎ.ಎನ್.ಎಫ್. ತಂಡ ಹಾಗೂ ಪೊಲೀಸ್ ಸಿಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ.
ಸಂಜೆ ಕಾರ್ಯಾಚರಣೆ ಪೂರ್ಣಗೊಳಿಸಿ ವಿಶೇಷ ಭದ್ರತೆಯ ಮೂಲಕ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಅನಾಮಿಕನನ್ನು ಕರೆತಂದು, ವಿಚಾರಣೆ ನಡೆಸಲಾಯಿತು. ಅಂತಿಮ ಕಾರ್ಯವಿಧಾನ ನಡೆಸಿ ಮತ್ತೆ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು. ಮಂಗಳವಾರ ಮತ್ತೆ ಸ್ಥಳ ಮಹಜರು ನಡೆಯುವ ಸಂಭವವಿದೆ.
ಎಎನ್ಎಫ್ ಸಹಿತ ಬಿಗಿ ಪೊಲೀಸ್ ಭದ್ರತೆ
ಎಸ್ ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್ ಸಹಿತ ಸೋಕೋ, ಅರಣ್ಯ ಇಲಾಖೆ, ಕಂದಾಯ, ಆಂತರಿಕ ಭದ್ರತಾ ವಿಭಾಗ ಇತರ ಪ್ರಮುಖರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಯಿತು. ಅನಾಮಿಕನ ಕರೆತರಲು ನಾಲ್ಕು ಮಿನಿ ಪೊಲೀಸ್ ಬಸ್, ಒಂದು ಬಸ್, ಉಳಿದಂತೆ ಬೆಳ್ತಂಗಡಿ ತಾಲೂಕಿನ ವೃತ್ತ ನೀರೀಕ್ಷಕರು ಹಾಗೂ ಎಲ್ಲ ಪೊಲೀಸ್ ಠಾಣೆಯ ಎಸ್.ಐ.ಗಳು ಸ್ಥಳದಲ್ಲಿ ಹಾಜರಿದ್ದರು. ಗುರುತಿಸಿದ 13 ಸ್ಥಳಗಳಲ್ಲಿ 30 ಜನ ಕಾರ್ಕಳ ಎಎನ್ಎಫ್ (ನಕ್ಸಲ್ ನಿಗ್ರಹ ಪಡೆ) ಸಿಬಂದಿ 15 ಮಂದಿ ರಾತ್ರಿ, 15 ಮಂದಿ ಹಗಲು ಹೀಗೆ ಎರಡು ಪಾಳಿದಲ್ಲಿ ಭದ್ರತೆ ವಹಿಸಲಾಗಿದೆ.
ಇಂದು 13 ಸ್ಥಳಗಳನ್ನು ಸಾಕ್ಷಿ ದೂರುದಾರ ಗುರುತಿಸಿದ್ದಾನೆ. ರಾತ್ರಿ ಕಾರ್ಯಾಚರಣೆ ಮಾಡುವಂತಿಲ್ಲ. ಭಾರೀ ಮಳೆಯೂ ಇರುವ ಕಾರಣ ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಮಂಗಳವಾರ ಬೆಳಗ್ಗಿನಿಂದಲೇ ಸ್ಥಳಗಳನ್ನು ಗುರುತಿಸುವ ಕಾರ್ಯವನ್ನು ಪುನರಾರಂಭಿಸಲಾಗುವುದು. ಬಳಿಕ ಮುಂದಿನ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ತನಿಖಾಧಿಕಾರಿ, ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹೇಳಿದ್ದಾರೆ.
ಎಸ್.ಐ.ಟಿ ತಂಡ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಮಂಗಳವಾರವೇ ಮೃತದೇಹ ಗಳನ್ನು ಹೂತು ಹಾಕಿದ ಸ್ಥಳಗಳಲ್ಲಿ ಅಗೆದು ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಆರಂಭಿಸುವ ನಿರೀಕ್ಷೆಯಿದೆ. ಅದಕ್ಕಾಗಿ ಅಗತ್ಯವಿರುವ ಅನುಮತಿಗಳನ್ನು ಎಸ್.ಐ.ಟಿ ತಂಡ ಈಗಾಗಲೇ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.
ಆದರೆ, ಹೂತು ಹಾಕಿರುವ ಸ್ಥಳಗಳನ್ನು ಗುರುತಿಸುವ ಕಾರ್ಯ ಸೋಮವಾರ ಇನ್ನೂ ಪೂರ್ಣಗೊಂಡಿಲ್ಲ. ಮಂಗಳವಾರ ಬೆಳಗ್ಗೆ ಇದು ಆರಂಭಗೊಳ್ಳಲಿದ್ದು, ಅದು ಎಷ್ಟು ಗಂಟೆಗೆ ಮುಗಿಯುತ್ತದೆ ಎಂಬುದರ ಮೇಲೆ ಮುಂದಿನ ಕಾರ್ಯಾಚರಣೆಗಳು ನಿರ್ಧಾರವಾಗಲಿದೆ.
ದೂರು ಸಾಕ್ಷಿದಾರನ ಪರ ವಕೀಲರು ಈಗಾಗಲೇ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ, ಕಲ್ಲೇರಿಯ ಪಟ್ರೋಲ್ ಪಂಪ್ ಸಮೀಪ ಹಾಗೂ ಇತರೆಡೆಗಳಲ್ಲಿಯೂ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಈ ಪ್ರದೇಶದಲ್ಲಿ ಇನ್ನೂ ಯಾವುದೇ ಸ್ಥಳಗಳನ್ನು ಗುರುತಿಸುವ ಕಾರ್ಯ ಮಾಡಲಾಗಿಲ್ಲ. ಈ ಹಿನ್ನಲೆಯಲ್ಲಿ ಮಂಗಳವಾರ ಈ ಪ್ರದೇಶದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಜಾಗಗಳನ್ನು ಗುರುತಿಸುವ ಕಾರ್ಯ ನಡೆಯುವ ನಿರೀಕ್ಷೆಯಿದೆ.







