ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಬಂಧ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ ಬಳಿಕ ವಂಚನೆ ಎಸಗಿರುವ ಪ್ರಕರಣಕ್ಕೆ ನಡೆದಿತ್ತು. ಇದೀಗ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಕೃಷ್ಣ ಜೆ.ರಾವ್‌ಗೆ ಭೂಗತ ಪಾತಕಿಯೊಬ್ಬನಿಂದ ಕೊಲೆ ಬೆದರಿಕೆ ಬಂದಿದೆ.
ಭೂಗತ ಪಾತಕಿ ಕಲಿ ಯೋಗೇಶ್ ಎಂದು ತನ್ನನ್ನು ಹೆಸರಿಸಿಕೊಂಡಿರುವ ವ್ಯಕ್ತಿ ಖಾಸಗಿ ಮಾಧ್ಯಮವೊಂದರ ವರದಿಗಾರರಿಗೆ ಕರೆ ಮಾಡಿ, ಕೃಷ್ಣ ಜೆ.ರಾವ್ ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಒಬ್ಬ ಯುವತಿಯನ್ನು ಗರ್ಭಿಣಿ ಮಾಡಿ ಮೋಸ ಮಾಡಿದ ವ್ಯಕ್ತಿ ಜೈಲಿನಲ್ಲಿರಬೇಕು. ಕೃಷ್ಣ ಜೆ.ರಾವ್ ಜೈಲಿನಿಂದ ಹೊರ ಬಂದ ಮೇಲೆ ಯುವತಿಯನ್ನು ಮದುವೆ ಆಗಿಲ್ಲ ಎಂದಾದರೆ ಆತನಿಗೆ ಗುಂಡು ಹೊಡೆದು ಸಾಯಿಸುವುದೇ ಸರಿ ಎಂದು ಎಚ್ಚರಿಕೆ ನೀಡಿದ್ದಾನೆ.
ಯುವತಿಗೆ ಅನ್ಯಾಯವಾಗಿದೆ. ಆಕೆ ಹಿಂದೂ ಅಲ್ಲವೇ? ಆಕೆಯ ಕುಟುಂಬದ ಬಳಿ ಹಣ ಇಲ್ಲ ಎಂದು ಅನ್ಯಾಯ ಮಾಡುವುದಾ? ಆಕೆಯ ಪರ ಯಾವ ರಾಜಕೀಯದವರೂ ನಿಲ್ಲುತ್ತಿಲ್ಲ ಎಂದು ಹಿಂದೂ ಸಂಘಟನೆ ಹಾಗೂ ಬಿಜೆಪಿಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾನೆ.







