ಸಮಗ್ರ ನ್ಯೂಸ್: ಕೇರಳದಲ್ಲಿ ಮಳೆಯ ಅಬ್ಬರ ಉಂಟಾಗಿದೆ. ಕಾಸರಗೋಡು ಸಹಿತ ಉತ್ತರ ಕೇರಳದ ನಾನಾ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿದಿದೆ.ಶನಿವಾರ ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುಪರ, ಕೋಝಿಕ್ಕೋಡ್, ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಯ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಧ್ಯಮ ಮಳೆ ಮತ್ತು ಗಂಟೆಗೆ 40 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಇತರ ಜಿಲ್ಲೆಗಳಲ್ಲಿಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಸಿದೆ.
ಭಾನುವಾರ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಕೇಂದ್ರ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ನೀಡಿದೆ. ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಭಾರಿ ಮಳೆ ಸಂದರ್ಭಗಳಲ್ಲಿ, ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಜಲಪಾತಗಳು, ಜಲಮೂಲಗಳು ಮತ್ತು ಮಲೆನಾಡು ಪ್ರದೇಶಗಳಿಗೆ ಮನರಂಜನಾ ಪ್ರವಾಸಗಳನ್ನು ಅಧಿಕಾರಿಗಳ ಸೂಚನೆಗಳ ಮೇರೆಗೆ ಮಾತ್ರ ಮಾಡಬೇಕು.
ಉತ್ತರ ಒಡಿಶಾ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಮೇಲೆ ಚಂಡಮಾರುತದ ಪರಿಚಲನೆ ಉಂಟಾಗಿದೆ. ಮಹಾರಾಷ್ಟ್ರ ಕರಾವಳಿಯಿಂದ ಕರ್ನಾಟಕ ಕರಾವಳಿಯವರೆಗೆ ವಾಯು ಭಾರ ಕುಸಿತ ಉಂಟಾಗಿದೆ. ಆದ್ದರಿಂದ ಮುಂದಿನ ಐದು ದಿನಗಳವರೆಗೆ ಕೇರಳದಲ್ಲಿ ಭಾರಿ ಮಳೆಯಾಗಲಿದೆ.







