ನೀವು ನಾಗರಹೊಳೆ ಹೆದ್ದಾರಿಯಲ್ಲಿ ಸಾಗುವಾಗ ವಾಹನದಿಂದ ಇಳಿಯುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದ್ಲೇಬೇಕು…

ಸಮಗ್ರ ನ್ಯೂಸ್: ನಾಗರಹೊಳೆಯಲ್ಲಿರುವ ಹೆದ್ದಾರಿಯ ಮೂಲಕ ಸಾಗಿಬಂದ ಕೇರಳದ ಕಾರೊಂದರಿಂದ ಪ್ರಯಾಣಿಕರೊಬ್ಬರು ವೀರನನಹೊಸಳ್ಳಿ ವಲಯದಲ್ಲಿ ಇಳಿದು ದಟ್ಟಕಾಡಿನ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅದನ್ನು ಮತ್ತೊಂದು ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲಿನ ಮೂಲಕ ವಿಡಿಯೋ ಮಾಡಿ, ಅದನ್ನು ನಾಣಚ್ಚಿ ಗೇಟ್ ನಲ್ಲಿ ಚೆಕ್ ಪೋಸ್ಟ್ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿಗೆ ತೋರಿಸಿ, ಕಾರು ಇಳಿದು ಮೂತ್ರ ವಿಸರ್ಜನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Ad Widget ... ..

ವಿಡಿಯೋವನ್ನು ಪರಿಶೀಲಿಸಿದ ಸಿಬ್ಬಂದಿಯು ಅದು ಕೇರಳದಲ್ಲಿ ನೋಂದಾವಣಿಯಾಗಿರುವ ಕಾರು ಎಂಬುದನ್ನು ಗುರುತಿಸಿದ್ದು, ಚೆಕ್ ಪೋಸ್ಟ್ ಬಳಿ ಆ ಕಾರು ಬಂದಾಗ ಅದನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಆ ಕಾರಿನಲ್ಲಿದ್ದವರಲ್ಲಿ ಒಬ್ಬರು 50 ವರ್ಷ ದಾಟಿದವರಿದ್ದು ಅವರು ಮಧುಮೇಹಿಯಾಗಿದ್ದು, ಅವರಿಗೆ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿರುತ್ತದೆ. ಅದರಿಂದಾಗಿ, ಅವರು ಕಾಡಿನ ಮೂಲಕ ಸಾಗುವಾಗ ಮಾರ್ಗ ಮಧ್ಯೆ ಇಳಿದು ಮೂತ್ರ ವಿಸರ್ಜನೆ ಮಾಡಿ ಪ್ರಯಾಣ ಮುಂದುವರಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ, ಕಾರಿನಲ್ಲಿದ್ದ ಇನ್ಸುಲಿನ್ ಇಂಜೆಕ್ಷನ್ ಗಳನ್ನು ತೋರಿಸಿದ್ದಾರೆ. ಅದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮತ್ತೊಮ್ಮೆ ಇಂಥ ತಪ್ಪು ಮಾಡಬಾರದೆಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

Ad Widget

ನಾಗರಹೊಳೆಯಲ್ಲಿ ವಾಹನಗಳಿಂದ ಏಕೆ ಇಳಿಯಬಾರದು?:
ನಾಗರಹೊಳೆಯ ಹೆದ್ದಾರಿಗಳು ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972ರ ಅಡಿಯಲ್ಲಿ ನಾಗರಹೊಳೆಯ ಇಡೀ ಪ್ರದೇಶವನ್ನು ರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ರಕ್ಷಿತ ಪ್ರದೇಶವೆಂದರೆ ಅಲ್ಲಿನ ಪರಿಸರದಲ್ಲಿ ಯಾವುದೇ ರೀತಿಯ ಏರುಪೇರು ಮಾಡುವಂಥ ಘಟನೆಗಳು ಅಲ್ಲಿ ನಿಷಿಧ್ಧ. ಹಾಗಾಗಿ, ಅಲ್ಲಿ, ವಾಹನದಿಂದ ಇಳಿಯುವುದು ಕಾನೂನು ಉಲ್ಲಂಘನೆ ಎನಿಸಿಕೊಳ್ಳುತ್ತದೆ ಹಾಗೂ ಆ ತಪ್ಪಿಗೆ ದಂಡ ವಿಧಿಸಲಾಗುತ್ತದೆ.

ನಾಗರಹೊಳೆಯಲ್ಲಿ ಆನೆಗಳು, ಚಿರತೆಗಳು, ಕಾಡುಕೋಣಗಳು ಮತ್ತು ಹುಲಿಗಳಂತಹ ದೊಡ್ಡ ಪ್ರಾಣಿಗಳು ರಸ್ತೆಗಳ ಸಮೀಪದಲ್ಲಿ ಸಂಚರಿಸುತ್ತವೆ. ವಾಹನದಿಂದ ಇಳಿಯುವುದರಿಂದ ಈ ಪ್ರಾಣಿಗಳು ಭಯಭೀತಗೊಂಡು ದಾಳಿ ಮಾಡಬಹುದು, ಇದು ಪ್ರಯಾಣಿಕರ ಜೀವಕ್ಕೆ ತೊಂದರೆ ಉಂಟು ಮಾಡಬಹುದು. ಆ ಕಾರಣದಿಂದಾಗಿ ಇಲ್ಲಿ ವಾಹನಗಳಿಂದ ಇಳಿಯುವ ಹಾಗಿಲ್ಲ.

ಇನ್ನು, ಕೆಲವರಿಗೆ ಯಾವುದಾರೂ ಪ್ರಾಣಿಗಳನ್ನು ನೋಡಿದ ಕೂಡಲೇ ಅವುಗಳ ಫೋಟೋ ಕ್ಲಿಕ್ಕಿಸುವ ಚಾಳಿ ಇರುತ್ತದೆ. ಅಂಥ ಸಂದರ್ಭಗಳಲ್ಲಿ ವಾಹನದಿಂದ ಇಳಿದು ಛಾಯಾಗ್ರಹಣ ಅಥವಾ ಇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ವನ್ಯಜೀವಿಗಳು ಅವರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ವಾಹನಗಳಿಂದ ಇಳಿಯಬಾರದೆಂಬುದಕ್ಕೆ ಇದೂ ಒಂದು ಕಾರಣವಾಗಿದೆ.

ಇನ್ನು ಮೂರನೇ ಕಾರಣವೇನೆಂದರೆ, ಸಾಮಾನ್ಯವಾಗಿ ರಸ್ತೆಬದಿಯಲ್ಲಿ ಇಳಿದು ಕಾರಿನಲ್ಲಿದ್ದ ಕಸ ಎಸೆದು ಹೋಗುವವರು ಇರುತ್ತಾರೆ. ಹಾಗೆ ಮಾಡುವುದರಿಂದ ಆ ಜೈವಿಕ ಪರಿಸರದಲ್ಲಿ ಪರಿಸರ ಮಾಲಿನ್ಯ ಮಾಡಿದಂತಾಗುತ್ತದೆ. ಅದರಿಂದ ಸಸ್ಯ ಸಂಪತ್ತಿಗೆ ಅದರಿಂದ ಪ್ರಾಣಿ ಸಂಪತ್ತಿಗೂ ಹಾನಿಯಾಗುವ ಸಾಧ್ಯತೆಗಳಿವೆ. ಆ ಕಾರಣಕ್ಕಾಗಿಯೂ ಅಲ್ಲಿ ವಾಹನಗಳಿಂದ ಇಳಿಯುವುದನ್ನು ನಿಷೇಧಿಸಲಾಗಿದೆ.

Leave a Comment

Your email address will not be published. Required fields are marked *