ಸಮಗ್ರ ನ್ಯೂಸ್: ಪತಿಯೇ ಗರ್ಭಿಣಿ ಪತ್ನಿಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಸಮೀಪ ನಡೆದಿದೆ.
ಮನೆಯೊಂದರಲ್ಲಿ ಸಜೀಪದ ತಿಮ್ಮಪ್ಪ ಮೂಲ್ಯ (52) ಹಾಗೂ ಅವರ ಗರ್ಭಿಣಿ ಪತ್ನಿ ಜಯಂತಿ (45) ಅವರ ಮೃತದೇಹಗಳು ಇಂದು ಪತ್ತೆಯಾಗಿದ್ದವು. ಆದರೆ ಯಾವುದೋ ವಿಷಯಕ್ಕೆ ಪತ್ನಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಮೃತರ ಸಂಬಂಧಿಗಳ ದೂರಿನಂತೆ ಪ್ರಕರಣ ದಾಖಲಾಗಿದೆ.
ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದರೆ, ತಿಮ್ಮಪ್ಪ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಸಮೀಪದವರು ಬೆಳಗ್ಗೆಯಾದರೂ ಬಾಗಿಲು ತೆರೆಯಲಿಲ್ಲವೇಕೆ ಎಂದು ಸಂಶಯದಿಂದ ಗಮನಿಸಿದಾಗ ವಿಷಯ ಗೊತ್ತಾಗಿದ್ದು, ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಿಮ್ಮಪ್ಪ ಮತ್ತು ಜಯಂತಿಗೆ 15 ವರ್ಷಗಳ ಹಿಂದೆ ಮದುವೆಯಾಗಿದೆ. ದೀರ್ಘಕಾಲದ ನಂತರ ಜಯಂತಿ ಗರ್ಭಿಣಿಯಾಗಿದ್ದು, ಜುಲೈ 2ರಂದು ಸೀಮಂತದ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕುಟುಂಬದಲ್ಲಿ ಸಂಭ್ರಮದ ವಾತಾವರಣವಿತ್ತು. ಆದರೆ, ಆ ನಿರೀಕ್ಷಿತ ಸಮಯದ ವೇಳೆ ದಾರುಣ ಅಂತ್ಯವನ್ನು ಕಂಡಿದೆ.
ತಿಮ್ಮಪ್ಪ ಅವರ ಮನೆ ಮಿತ್ತಮಜಲು ಪ್ರದೇಶದಲ್ಲಿದ್ದು, ಪತ್ನಿ ಜಯಂತಿ ಅವರು ತಾಯಿಯ ಮನೆಯಾದ ಬಡಗುಂಡಿಯಲ್ಲಿ ಇದ್ದರು. ಮೃತದೇಹಗಳು ಜಯಂತಿಯ ಮನೆಯಲ್ಲೇ ಪತ್ತೆಯಾಗಿವೆ. ಘಟನೆ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.






