ಸಮಗ್ರ ನ್ಯೂಸ್: ಅಭಿಮಾನಿಗಳ 18 ವರ್ಷಗಳ ಕನಸನ್ನು ನನಸು ಮಾಡಿರುವ ಆರ್ಸಿಬಿ ತಂಡ ಈ ಬಾರಿಯ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಹಿನ್ನಲೆಯಲ್ಲಿ ಆರ್ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನತ್ತ ಜನಸಾಗರವೇ ಹರಿದುಬಂದಿದೆ.
ಟ್ರೋಫಿ ಗೆದ್ದ ತಂಡವನ್ನು ನೋಡಲು ನಗರದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಯುವಕ, ಯುವತಿಯರು ಆಗಮಿಸುತ್ತಿದ್ದು, ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿದೆ.
ಈ ವೇಳೆ ಬಾಲಕನೊಬ್ಬ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ ಘಟನೆಯಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಾಲ್ತುಳಿತದಲ್ಲಿ ಈವರೆಗೆ 11 ಮಂದಿ ಮೃತಪಟಿದ್ದಾರೆ ಎನ್ನಲಾಗುತ್ತಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ತೆರೆದ ವಾಹನದಲ್ಲಿ ಮೆರವಣಿಗೆ ನಡೆಸದೆ ಒಂದೇ ಕಡೆ ಕಾರ್ಯಕ್ರಮ ನಡೆಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಅಭಿಮಾನಿಗಳು ಒಂದೆಡೆ ಸೇರಿದ ಕಾರಣ ಉಸಿರುಗಟ್ಟಿದ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸ್ ಇಲಾಖೆಯೂ ವಿಫಲವಾಗಿದೆ.
ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಈ ರೀತಿಯ ಅವಘಡ ನಡೆದಿರುವುದರಿಂದ ರಾಜ್ಯ ಸರ್ಕಾರ ಯಮಕಿಂಕರನಂತೆ ಕಂಡುಬಂದಿದೆ. ಒಂದೆಡೆ ಮುಗಿಲು ಮುಟ್ಟಿದ ಸಂಭ್ರಮವಿದ್ದರೆ, ಮತ್ತೊಂದೆಡೆ ಸಾವಿನ ಆಕ್ರಂದನ ಕರ್ಣ ಕಠೋರವಾಗಿದೆ.