ಸಮಗ್ರ ನ್ಯೂಸ್: ಐಪಿಎಲ್ ಪಂದ್ಯಾವಳಿಯ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡಕ್ಕೆ ಅವರದ್ದೇ ನೆಲದಲ್ಲಿ ಸೋಲುಣಿಸಿ ಅತ್ಯಮೋಘ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದ ಆರ್ ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಿಗಿ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ 101 ರನ್ ಗಳ ಸಣ್ಣ ಮೊತ್ತಕ್ಕೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಆರ್ ಸಿಬಿ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ 8 ವಿಕೆಟ್ ಗಳ ಅಮೋಘ ಜಯಭೇರಿ ಬಾರಿಸಿತು.
ಅತ್ಯಮೋಘ ಆಟವಾಡಿದ ಫಿಲಿಪ್ ಸಾಲ್ಟ್ ಸಾಲ್ಟ್ 56 ರನ್(27ಎಸೆತ) ಗಳಿಸಿ ಅಜೇಯರಾಗಿ ಉಳಿದರು.
ವಿರಾಟ್ ಕೊಹ್ಲಿ ಅವರು 12 ರನ್ ಗಳಿಸಿದ್ದ ವೇಳೆ ಜೇಮಿಸನ್ ಎಸೆದ ಚೆಂಡನ್ನು ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಕೈಗಿತ್ತು ನಿರಾಶರಾದರು. ಮಾಯಾಂಕ್ ಅಗರವಾಲ್ ಮುಶೀರ್ ಖಾನ್ ಎಸೆದ ಚೆಂಡನ್ನು ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಕೈಗಿತ್ತು ಪೆವಿಲಿಯನ್ ಗೆ ಮರಳಿದರು. ಅವರು13 ಎಸೆತಗಳಲ್ಲಿ 19 ರನ್ ಕೊಡುಗೆ ನೀಡಿದರು. ನಾಯಕ ರಜತ್ ಪಾಟಿದಾರ್ 8 ಎಸೆತಗಳಲ್ಲಿ 15 ರನ್ ಗಳಿಸಿದರು.
ಪಂಜಾಬ್ ಇನ್ನಿಂಗ್ಸ್ ನಲ್ಲಿ 9 ರನ್ ಆಗುವಷ್ಟರಲ್ಲಿ ಪ್ರಿಯಾಂಶ್ ಆರ್ಯ ಅವರ ವಿಕೆಟ್ ಪಡೆಯಿತು. ಆ ಬಳಿಕ ಒಂದಾದ ಬಳಿಕ ಒಂದು ಆಘಾತ ನೀಡುತ್ತಲೇ ಹೋಯಿತು. ಪ್ರಭಸಿಮ್ರಾನ್ ಸಿಂಗ್ 18 ಕ್ಕೆ ನಿರ್ಗಮಿಸಿದರು. ಮಾರ್ಕಸ್ ಸ್ಟೊಯಿನಿಸ್ 26 ರನ್ , ಕೊನೆಯಲ್ಲಿ ಅಜ್ಮತುಲ್ಲಾ ಒಮರ್ಜಾಯ್ 18 ರನ್ ಹೊರತು ಪಡಿಸಿ ಉಳಿದವರ್ಯಾರು ಒಂದಂಕಿ ದಾಟಲಿಲ್ಲ.
ಬಿಗಿ ಬೌಲಿಂಗ್ ದಾಳಿ ನಡೆಸಿ ಹ್ಯಾಜಲ್ವುಡ್ ಮತ್ತು ಸುಯಾಶ್ ಶರ್ಮ ತಲಾ 3 ವಿಕೆಟ್ ಕಬಳಿಸಿದರು. ಯಶ್ ದಯಾಳ್ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ರೋಮ್ಯಾರಿಯೊ ಶೆಫರ್ಡ್ ತಲಾ 1 ವಿಕೆಟ್ ಕಿತ್ತರು.
ಸೋತ ಪಂಜಾಬ್ ತಲೆ ಕೆಡಿಸಿಕೊಳ್ಳಬೇಕಿಲ್ಲ, ಅದಕ್ಕೆ ಇನ್ನೊಂದು ಅವಕಾಶವಿದ್ದು ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತ ತಂಡದೆದುರು ಆಡಿ ಗೆದ್ದರೆ ಫೈನಲ್ ಟಿಕೆಟ್ ಸಿಗಲಿದೆ.