ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆಯ ಪ್ರಮಾಣ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೇ 29 ಮತ್ತು 30 ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಅವಧಿಗೂ ಮುನ್ನ ಮಳೆ ಅತಿಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ವಿಪತ್ತ ನಿರ್ವಹಣಾ ಪಡೆಯನ್ನು ಜಿಲ್ಲೆಗೆ ಕರೆಸಲಾಗಿದೆ.
2018, 2019 ಮತ್ತು 2020 ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದ ಅನಾಹುತಗಳ ಕರಾಳ ದಿನಗಳು ಹಸಿರಾಗಿರುವಾಗಲೇ ಪ್ರಸ್ತುತ ವರ್ಷ ಅವಧಿಗೂ ಮುನ್ನ ಮುಂಗಾರು ಆರಂಭಗೊಂಡು ಇಲ್ಲಿಯವರೆಗೆ 25 ಇಂಚಿಗೂ ಅಧಿಕ ಮಳೆಯಾಗಿದೆ.
ಗಾಳಿ ಮಳೆಯ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೂ ಅಪಾರ ಹಾನಿ ಉಂಟಾಗಿದೆ. ಈ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಆತಂಕದ ಛಾಯೆ ಮೂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಎನ್‌ಡಿಆರ್‌ಎಫ್ ತಂಡವನ್ನು ಅವಧಿಗೂ ಮೊದಲೇ ಜಿಲ್ಲೆಯಲ್ಲಿ ನಿಯೋಜಿಸಿದೆ.
ಎನ್‌ಡಿಆರ್‌ಎಫ್ ವೃತ್ತ ನಿರೀಕ್ಷಕ ಹರಿಶ್ಚಂದ್ರ ಪಾಂಡೆ ನೇತೃತ್ವದ 80 ಯೋಧರ ತಂಡ ಬೆಂಗಳೂರಿನಿಂದ ಮಡಿಕೇರಿಗೆ ಆಗಮಿಸಿದ್ದು, ಜನರ ರಕ್ಷಣೆಗೆ ಸನ್ನದ್ಧವಾಗಿದೆ. ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ಬೀಡು ಬಿಟ್ಟಿರುವ ಯೋಧರು ಗಾಳಿ, ಮಳೆ, ಪ್ರವಾಹ, ಭೂಕುಸಿತದಂತಹ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದಾರೆ.