ಸಮಗ್ರ ನ್ಯೂಸ್: ಉಳ್ಳಾಲ ತಾಲೂಕಿನ ಇರಾ ಗ್ರಾಮದ ಸರ್ವೆ ನಂಬರ್ 279/5 ರಲ್ಲಿ 1.39 ಎಕರೆ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆ ಕಟ್ಟಲು ಜಾಗದಲ್ಲಿದ್ದ ಕಟ್ಟಡ ಕಲ್ಲು ತೆರವು ಮಾಡಿ ಸಮತಟ್ಟು ಮಾಡಲು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 28/10/2024 ರಂದು ಅರ್ಜಿ ಸಲ್ಲಿಸಿದ್ದು, ಇದಕ್ಕೆ ಉಳ್ಳಾಲ ತಹಶಿಲ್ದಾರರು 21/03/2025 ರಂದು ಪ್ರಮಾಣ ಪತ್ರ ನೀಡಿರುತ್ತಾರೆ. ಆದರೆ ಗಣಿ ಇಲಾಖೆಯಲ್ಲಿ ಅನುಮತಿ ಪತ್ರ ನೀಡಿರುವುದಿಲ್ಲ . ಈ ಬಗ್ಗೆ ವಿಚಾರಿಸಲು ಗಣಿ ಇಲಾಖೆಗೆ ಹೋದಾಗ ಉಪ ನಿರ್ದೇಶಕಿ ಕೃಷ್ಣವೇಣಿಯ ಕೊಠಡಿಗೆ ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಸಿ ಫೈಲಿಗೆ ಅನುಮತಿ 50 ಸಾವಿರ ಹಣ ತೆಗೆದುಕೊಳ್ಳಿ ನಂತರ ಸಹಿ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಉಪ ನಿರ್ದೇಶಕಿ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ವಿರುದ್ಧ ದೂರುದಾರ ದೂರು ನೀಡಿದ್ದರು.
ಲಂಚದ ಹಣ 50 ಸಾವಿರ ರೂಪಾಯಿ ಮಂಗಳೂರು ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯಲ್ಲಿ ಮೇ.28 ರಂದು ದೂರುದಾರರ ಕೈಯಿಂದ ವಾಹನ ಚಾಲಕ ಮಧು ಎಂಬಾತನ ಮೂಲಕ ಉಪ ನಿರ್ದೇಶಕಿ ಕೃಷ್ಣ ವೇಣಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡ್ ಅಗಿ ವಾಹನ ಚಾಲಕ ಮಧು ಮತ್ತು ಉಪ ನಿರ್ದೇಶಕಿ ಕೃಷ್ಣವೇಣಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷರಾದ ಡಾ.ಗಾನ ಪಿ ಕುಮಾರ್, ಶ್ರೀ ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್ , ಉಡುಪಿ ಜಿಲ್ಲಾ ಲೋಕಾಯುಕ್ತ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯಕ್ ಸಿಬ್ಬಂದಿ ಜೊತೆ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.