ಸಮಗ್ರ ನ್ಯೂಸ್: “ನಿಮ್ಮ ಕನ್ನಡ ನಮ್ಮ ತಮಿಳಿನಿಂದ ಹುಟ್ಟಿದ್ದು’ ಎಂಬ ಬಹುಭಾಷಾ ನಟ ಕಮಲ್ ಹಾಸನ್ ಹೇಳಿಕೆ ಈಗ ಭಾರೀ ವಿವಾದವೆಬ್ಬಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ತಮ್ಮ “ಥಗ್ ಲೈಫ್’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲೇ ಕಮಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಡಾ| ರಾಜ್‌ಕುಮಾರ್ ಕುಟುಂಬದ ಬಗ್ಗೆ, ಕನ್ನಡಿಗರ ಪ್ರೀತಿಯ ಬಗ್ಗೆ, ಅಭಿಮಾನದ ಬಗ್ಗೆ ಮಾತನಾಡಿದ ಕಮಲ್ ಹಾಸನ್, “ನಿಮ್ಮ ಕನ್ನಡ ನಮ್ಮ ತಮಿಳಿನಿಂದ ಹುಟ್ಟಿದ್ದು’ ಎಂದು ಹೇಳಿದ್ದರು. ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದು ತಮಿಳಿಗರು ಕಮಲ್ ಹಾಸನ್ ಮಾತನ್ನು ಸಮರ್ಥಿಸಿಕೊಂಡರೆ, ಕನ್ನಡಿಗರು ಸಿಟ್ಟಾಗಿದ್ದಾರೆ. ಕನ್ನಡ ತಮಿಳಿನಿಂದ ಬಂದಿಲ್ಲ. ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು ಎಂದು ಕನ್ನಡಿಗರು ಕಮಲ್ ಹೇಳಿಕೆ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.