ಸಮಗ್ರ ನ್ಯೂಸ್: ಬಂಟ್ವಾಳದ ಕೊಳತ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ( 32) ಹತ್ಯೆ ಖಂಡಿಸಿ ಬಿ.ಸಿ ರೋಡ್ ನಲ್ಲಿ ಸ್ವಯಂಪ್ರೇರಿತ ಬಂದ್ ಮಾಡಲಾಗಿದೆ.
ಮುಸ್ಲಿಮ್ ಸಮುದಾಯದ ಹಲವರು ಬಿ.ಸಿ ರೋಡ್, ಫರಂಗಿಪೇಟೆ ಸೇರಿದಂತೆ ಹಲವು ಕಡೆ ತಮ್ಮ ವ್ಯಾಪಾರ, ವಹಿವಾಟನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತವಾಗಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ.
ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಇಂದು ಮುಂಜಾನೆ ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಮಯ್ಯತ್ ಸ್ನಾನ ನಿರ್ವಹಿಸಲಾಯಿತು. ಮಯ್ಯತ್ ನಮಾಝ್ ಬಳಿಕ ಅಲ್ಲಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು.
ಮೃತದೇಹವು ಕುತ್ತಾರ್ , ತೊಕ್ಕೊಟ್ಟು, ಪಂಪ್ ವೆಲ್ ಮಾರ್ಗವಾಗಿ ಫರಂಗಿಪೇಟೆ ತಲುಪಿದಾಗ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಗುಂಪು ರಸ್ತೆ ತಡೆ ನಡೆಸಿ ಹತ್ಯೆಯನ್ನು ಖಂಡಿಸಿದರು. ಅಲ್ಲದೆ ಬಿಸಿ ರೋಡ್, ಫರಂಗಿಪೇಟೆಯಲ್ಲಿ ಬೆಳಿಗ್ಗಿನಿಂದಲೇ ಅಂಗಡಿ- ಮುಂಗಟ್ಟುಗಳನ್ನು ವ್ಯಾಪಾರಿಗಳು ಬಂದ್ ಮಾಡಿದ್ದರು.