ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಗೆ ಬಿಗ್ ಶಾಕ್ ಎದುರಾಗಿದ್ದು, 6 ವರ್ಷಬಿಜೆಪಿಯಿಂದ ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಯಲ್ಲಿರುವ ಎಸ್ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅಂತರ ಕಾಯ್ದುಕೊಂಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರನ್ನು ಬಿಜೆಪಿ ಹೈಕಮಾಂಡ್ 6 ವರ್ಷ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.
ಇಬ್ಬರೂ ಶಾಸಕರು ಮೂಲವಾಗಿ ಕಾಂಗ್ರೆಸ್ ಪಕ್ಷದವರಾಗಿದ್ದು, ಕಳೆದ ಅವಧಿಯಲ್ಲಿ ಕುಮಾರಸ್ವಾಮಿ ಸರ್ಕಾರವನ್ನು ಕೆಡವಿ ಬಿಜೆಪಿಗೆ ಸೇರ್ಪಡೆಯಾಗಿ ಗೆದ್ದು ಸಚಿವರಾಗಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ಪಕ್ಷದ ಪರವಾಗಿ ಕೆಲಸ ಮಾಡದೇ ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದರು. ಬಿಜೆಪಿಯಿಂದ ಕೈಗೊಳ್ಳುವ ಯಾವುದೇ ನಿರ್ಣಯಕ್ಕೂ ಅವರು ಬದ್ಧತೆ ಪ್ರದರ್ಶನ ಮಾಡುತ್ತಿರಲಿಲ್ಲ.
ಸರ್ಕಾರದಿಂದ ಮಾಡುವ ಎಲ್ಲ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ನಾಯಕರಂತೆ ಗುರುತಿಸಿಕೊಂಡು, ವಿರೋಧ ಪಕ್ಷದವರಂತೆ ಕೆಲಸ ಮಾಡದೇ ಬಿಜೆಪಿ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಎಷ್ಟೇ ಎಚ್ಚರಿಕೆ ನೀಡಿದರೂ ತಮ್ಮ ನಡೆಯನ್ನು ತಿದ್ದಿಕೊಳ್ಳದ ಹಿನ್ನೆಲೆಯಲ್ಲಿ ಇದೀಗ ಯಶವಂತಪುರ ವಿಧಾನಸಭಾ ಕ್ಷೇತ್ರ ಎಸ್.ಟಿ. ಸೋಮಶೇಖರ್ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಇಬ್ಬರನ್ನೂ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.