ಸಮಗ್ರ ನ್ಯೂಸ್: ಭಾರೀ ಮಳೆಯಿಂದ ಕೃಷಿ ಹಾನಿಯ ಆತಂಕದಲ್ಲಿರುವ ಮಧ್ಯೆಯೇ ಅಡಿಕೆ ಬೆಳೆಗಾರರ ಪಾಲಿಗೆ ಸಿಹಿ ಸುದ್ದಿ ಬಂದಿದೆ. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ. 500 ಗಡಿ ದಾಟಿ ಮುಂದಡಿ ಇಟ್ಟಿದೆ.
ಇದರೊಂದಿಗೆ ಹೊಸ, ಸಿಂಗಲ್ ಚೋಲ್, ಡಬ್ಬಲ್ ಚೋಲ್ ಮೂರು ವಿಧದ ಅಡಿಕೆ ಧಾರಣೆಯು 500 ಗಡಿ ದಾಟಿ ದಾಖಲೆ ಬರೆದಿದೆ. ಹೊಸ ಅಡಿಕೆ ಧಾರಣೆ 500 ಗಡಿ ತಲುಪುವ ನಿರೀಕ್ಷೆಯ ಬಗ್ಗೆ ಮಾರುಕಟ್ಟೆ ಮೂಲಗಳು ತಿಳಿಸಿದ್ದವು. ಇಳುವರಿ ಕುಸಿತ ಮತ್ತು ಹವಾಮಾನ ವೈಪರೀತ್ಯರಿಂದ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಿದ್ದು, ಪೂರೈಕೆಯಾಗುತ್ತಿಲ್ಲ.
ಮೇ 26 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ. 495 ರೂ., ಸಿಂಗಲ್ ಚೋಲ್ 520 ರೂ., ಡಬ್ಬಲ್ ಚೋಲ್ ಧಾರಣೆ 520 ರೂ. ದಾಖಲಾಗಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 505 ರೂ. ಸಿಂಗಲ್ ಚೋಲ್ ಧಾರಣೆ 525 ರೂ., ಡಬ್ಬಲ್ ಚೋಲ್ ಧಾರಣೆ 525 ರೂ. ದಾಖಲಾಗಿತ್ತು. ಅಲ್ಲದೇ ಹಳೆ ಪಟೋರಾ ಧಾರಣೆ ಕೆ.ಜಿ.ಗೆ 380 ರೂ. ಇದ್ದು ಸದ್ಯವೇ 400 ರೂ. ಗಡಿ ದಾಟುವ ಸಾಧ್ಯತೆ ಇದೆ.
ಕೆಲ ದಿನಗಳಿಂದ ಹೊಸ ಅಡಿಕೆಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು ಅದರೊಂದಿಗೆ ಹಳೆ ಅಡಿಕೆಯು ಪೈಪೋಟಿ ನೀಡುತ್ತಿದೆ. ಈ ಮಧ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಪೂರೈಕೆ ಆಗದೆ ಕೊರತೆ ಸೃಷ್ಟಿಸಿತ್ತು. ಹೀಗಾಗಿ ಧಾರಣೆ ಏರಿಸಿ ಅಡಿಕೆ ಖರೀದಿಗೆ ಮಾರುಕಟ್ಟೆ ಮೂಲ ಗಳು ತಂತ್ರಗಾರಿಕೆ ಪ್ರದರ್ಶಿಸಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಧಾರಣೆ ಇನ್ನಷ್ಟು ಏರುವ ಸಾಧ್ಯತೆ ಇದೆ.