ಸಮಗ್ರ ನ್ಯೂಸ್: ಮುಂಗಾರು ಬಹುತೇಕ ರಾಜ್ಯವನ್ನು ಪ್ರವೇಶಿಸಲು ಸಿದ್ದತೆ ನಡೆಸಿದ್ದು ಇದರ ಮುನ್ಸೂಚನೆಯೆಂಬಂತೆ ಕಳೆದೆರೆಡು ದಿನಗಳಿಂದ ದಕ್ಷಿಣಕನ್ನಡದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಕುಮಾರಾಧಾರ ಹಾಗೂ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು ಯಾತ್ರಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಳೆಯಾಗುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟ ಮುಳುಗಡೆಯಾಗಿದೆ.
ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಭಕ್ತರು ಸ್ನಾನಘಟ್ಟದ ಬಳಿ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಭಕ್ತರು ಕೇವಲ ನದಿ ನೀರನ್ನು ತಲೆಗೆ ಚಿಮುಕಿಸಲು ಮಾತ್ರ ಅನುಮತಿ ನೀಡಲಾಗಿದೆ. ದೇವಸ್ಥಾನದ ಆಡಳಿತವು ಸ್ನಾನಘಟ್ಟದ ಸುತ್ತ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮತ್ತು ಕಲ್ಮಂಜ ಗ್ರಾಮದಲ್ಲಿ ಹರಿಯುವ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿರುವ ಕಿಂಡಿ ಅಣೆಕಟ್ಟೆಗಳ ಹಲಗೆ ತೆರವು ಕಾರ್ಯ ಪೂರ್ಣಗೊಳ್ಳದ ಕಾರಣ ಮುಂಡಾಜೆ ಮತ್ತು ಕಲ್ಮಂಜ ಗ್ರಾಮಗಳಲ್ಲಿ ಭಾನುವಾರ ಪ್ರವಾಹ ಭೀತಿ ಉಂಟಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿಪತ್ತು ನಿರ್ವಹಣೆಗೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣ ದಳಗಳು ಜಿಲ್ಲೆಗೆ ಆಗಮಿಸಲಿದೆ ಎಂದು ಪ್ರಭಾರ ಜಿಲ್ಲಾಧಿ ಕಾರಿ ಡಾ| ಕೆ. ಆನಂದ್ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ದಳ (ಎನ್‌ಡಿಆರ್‌ಎಫ್)ದ ಒಂದು ತಂಡವು ಆಗಮಿಸಲಿದ್ದು, ಇದನ್ನು ಪುತ್ತೂರಿನಲ್ಲಿ ಇಡಲಾಗುವುದು. ರಾಜ್ಯ ವಿಪತ್ತು ದಳ (ಎಸ್‌ಡಿಆರ್‌ಎಫ್) ದ ಎರಡು ತಂಡವು ಮಂಗಳೂರು ಹಾಗೂ ಸುಬ್ರಹ್ಮಣ್ಯದಲ್ಲಿ ಇರಲಿದೆ. ಈ ದಳಗಳು ಎಲ್ಲ ರೀತಿಯ ಸಲಕರಣೆ, ಅಗತ್ಯ ಯಂತ್ರೋಪಕರಣಗಳೊಂದಿಗೆ ಬರಲಿದ್ದು, ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ಕಾರ್ಯಾಚರಿಸಲಿದೆ. ಎಸ್‌ಡಿಆರ್‌ಎಫ್ ತಂಡ ಈಗಾಗಲೆ ಆಗಮಿಸಿದೆ ಎಂದು ಅವರು ಹೇಳಿದರು.
ಶಿಥಿಲಗೊಂಡಿರುವ ಅಂಗನವಾಡಿ ಮತ್ತು ಶಾಲಾ ಕೊಠಡಿಗಳನ್ನು ತೆರವುಗೊಳಿಸ ಬೇಕು ಎಂದು ಡಾ| ಕೆ. ಆನಂದ್ ಸೂಚಿಸಿದರು. ರಾ. ಹೆ. ಕಾಮಗಾರಿಗಳಿಂದ ಕೆಲವು ಜನವಸತಿ ಪ್ರದೇಶಗಳಲ್ಲಿ ತೀವ್ರ ತೊಂದರೆಯಾಗಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳಲು ಅವರು ರಾ.ಹೆ.ಪ್ರಾ ಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಿದ್ದಾರೆ.