ಸಮಗ್ರ ನ್ಯೂಸ್: ಒಂದು ವೇಳೆ ರಾಜ್ಯದಲ್ಲಿ ಈಗಲೇ ವಿಧಾನಸಭೆ ಚುನಾವಣೆ ನಡೆದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜನಪ್ರಿಯ ಪಂಚಗ್ಯಾರಂಟಿ ಯೋಜನೆಗಳನ್ನು ಮೆಟ್ಟಿ ಪ್ರತಿಪಕ್ಷ ಬಿಜೆಪಿ ಮೊದಲ ಬಾರಿಗೆ ಸ್ವತಂತ್ರವಾಗಿ ಸ್ಪಷ್ಟ ಜನಾದೇಶ ಪಡೆದು ಸರ್ಕಾರ ರಚನೆ ಮಾಡಲಿದೆ ಎಂದು ಖಾಸಗಿ ಸಂಸ್ಥೆಯ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಹೈದರಾಬಾದ್ ಮೂಲದ ಪೀಪಲ್ಸ್ ಪಲ್ಸ್ ಆರ್ಗನೈಸೇಷನ್ ಎಂಬ ಸರ್ಕಾರೇತರ ಸಂಸ್ಥೆಯೊಂದು, ಕೊಮೆಡೊ ಟೆಕ್ನಾಲಜೀಸ್ ಎಂಬ ಸಂಸ್ಥೆಯೊಂದಿಗೆ ಸೇರಿ ಕರ್ನಾಟಕದ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆಯ ವರದಿಯಂತೆ, ಕರ್ನಾಟಕದ ಪ್ರಸಕ್ತ ಸನ್ನಿವೇಶದಲ್ಲೇನಾದರೂ ಚುನಾವಣೆ ನಡೆದರೆ ಬಿಜೆಪಿಯು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಅಂಶ ತಿಳಿದುಬಂದಿದೆ.
ಒಂದು ತಿಂಗಳ ಕಾಲ ನಡೆದ ಸಮೀಕ್ಷೆಯಲ್ಲಿ, ಬಿಜೆಪಿ 136-159 ಸ್ಥಾನಗಳನ್ನು ಗಳಿಸುವ ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 40.3 ಪ್ರತಿಶತದಷ್ಟು (2023ರಲ್ಲಿ 42.88 ಪ್ರತಿಶತ) ಕಡಿಮೆ ಮತ ಹಂಚಿಕೆಯೊಂದಿಗೆ 62-82 ಸ್ಥಾನಗಳನ್ನು ಗೆಲ್ಲಲಿದೆ ಎಂದು ಊಹಿಸಲಾಗಿದೆ. ಆಡಳಿತ ಪಕ್ಷವು ಗಮನಾರ್ಹ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ.
ಕುತೂಹಲಕಾರಿಯಾಗಿ, ಜೆಡಿ(ಎಸ್) ಕೇವಲ 3-6 ಸ್ಥಾನಗಳನ್ನು ಮಾತ್ರ ಗೆಲ್ಲುವ ಮೂಲಕ ಶೇ. 5ರಷ್ಟು (2023 ರಲ್ಲಿ ಶೇ. 18.3) ಮತಗಳ ಪಾಲನ್ನು ಪಡೆಯಲಿದೆ. ಬಿಜೆಪಿ ಕಳೆದ 20 ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಮೂರು ಬಾರಿ (2004, 2008, 2018) ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಒಟ್ಟು 224 ಸ್ಥಾನಗಳಲ್ಲಿ 113 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯನ್ನು (ಸರಳ ಬಹುಮತ) ಮುಟ್ಟುವ ಮೂಲಕ ಅದು ಎಂದಿಗೂ ಅಧಿಕಾರವನ್ನು ಪಡೆದುಕೊಂಡಿಲ್ಲ.