ರಾಜ್ಯದಲ್ಲಿ ಜನೌಷಧಿ ಕೇಂದ್ರಗಳು ಸಂಪೂರ್ಣ ಸ್ಥಗಿತಗೊಳ್ಳುತ್ತವೆಯೇ? ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುತ್ತದೆ‌ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಒಟ್ಟು 1400 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳನ್ನ ಮಾತ್ರ ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Ad Widget . Ad Widget . Ad Widget .

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಸರ್ಕಾರವೇ ಉಚಿತವಾಗಿ ಔಷಧಿಗಳನ್ನು ನೀಡುವಾಗ, ಆಸ್ಪತ್ರೆಗಳಲ್ಲಿ ಔಷಧಿಗಳ ಮಾರಾಟ ಮಾಡುವ ಮೆಡಿಕಲ್ ಶಾಪ್ ಗಳು ಏಕೆ ಬೇಕು ಎಂದು ಹೇಳಿದರು.

Ad Widget .

ಜನೌಷಧಿ ಕೇಂದ್ರಗಳ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಬೆರೆಸುವುದು ಸರಿಯಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳ ಹೊರತಾಗಿ ರಾಜ್ಯದಲ್ಲಿ ಇನ್ನು 1220 ಜನೌಷಧಿ ಕೇಂದ್ರಗಳಿವೆ. ಅಲ್ಲದೇ ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಎಲ್ಲ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿ ಎಂದು ಹೇಳಿಲ್ಲ. ಹೊಸದಾಗಿ ಸಲ್ಲಿಕೆಯಾಗಿದ್ದ 31 ಪ್ರಸ್ತಾವನೆಗಳನ್ನ ತಿರಸ್ಕರಿಸಲಾಗಿದೆ. ಹಾಲಿ ಆಸ್ಪತ್ರೆಗಳ ಆವರಣದಲ್ಲಿರುವ ಕೇಂದ್ರಗಳು ಇಲಾಖೆ, ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನ ಪರಿಶೀಲಿಸಿ ಕ್ರಮ ಜರುಗಿಸಲು ಸೂಚಿಸಲಾಗಿದೆ.‌ ಹಲವು ಜನೌಷಧಿ ಕೇಂದ್ರಗಳದ್ದು ಒಪ್ಪಂದಗಳು ನವೀಕರಣವಾಗಿಲ್ಲ. ಇನ್ನು ಕೆಲವು ಕೇಂದ್ರಗಳು ಇತ್ತಿಚೆಗೆ ಆರಂಭವಾಗಿದ್ದು ಅವರು ಸಾಕಷ್ಟು ಬಂಡವಾಳ ಹೂಡಿರುತ್ತಾರೆ. ಅವರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಅವರ ಒಪ್ಪಂದ ಮುಗಿದ ಬಳಿಕವೇ ಸ್ಥಗಿತಗೊಳಿಸುವ ಕುರಿತು ಆಲೋಚಿಸಲಾಗಿದೆ ಎಂದರು.

ಜನೌಷಧಿ ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜಕೀಯ ಮಾಡುವ ಯಾವುದೇ ಉದ್ದೇಶವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿಯೇ ಔಷಧಿ ಸಿಗುವಾಗ ಆಸ್ಪತ್ರೆಗಳ ಆವರಣದಲ್ಲಿ ಔಷಧ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಒಂದೇ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನೌಷಧಿ ಕೇಂದ್ರಗಳಲ್ಲಿ ಜನರಿಕ್ ಮೆಡಿಸಿನ್ ಮಾತ್ರ ಮಾರಾಟ ಮಾಡಬೇಕು. ಆದರೆ ಹಲವು ಜನೌಷಧಿ ಕೇಂದ್ರಗಳಲ್ಲಿ ಬ್ರಾಂಡೆಡ್ ಮೆಡಿಸಿನ್ ಗಳನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಔಷಧ ನಿಯಂತ್ರಣ ಮಂಡಳಿಯವರು ಪರಿಶೀಲನೆ ನಡೆಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.‌

ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳಲ್ಲಿ ಔಷಧಿಗಳ ಕೊರತೆಯಿಲ್ಲ. ಕೆಲವು ಕಡಿಮೆ ಬೇಡಿಕೆ ಇರುವ ಔಷಧಿಗಳು ಇಲ್ಲದಿದ್ದರೆ ಅವುಗಳನ್ನ BPPI ನಿಂದ ಖರೀದಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಖರೀದಿಗೆ ಅಗತ್ಯವಿರುವ ಹಣಕಾಸಿನ ಲಭ್ಯತೆಯೂ ಆಸ್ಪತ್ರೆಗಳ ಬಳಿ ಇದೆ. ಹೀಗಾಗಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಔಷಧಗಳನ್ನ ಪಡೆಯಬೇಕು. ವೈದ್ಯರು ಚೀಟಿ ಕೊಟ್ಟು ಹೊರಗಡೆಯಿಂದ ಔಷಧಗಳನ್ನು ತರಿಸುವ ಪದ್ದತಿ ನಿಲ್ಲಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Leave a Comment

Your email address will not be published. Required fields are marked *