ಸಮಗ್ರ ನ್ಯೂಸ್: ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿ ಶಮಂತ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬ್ರೋ ಗೌಡ ಅವರು ಈ ವರ್ಷ ಫೆಬ್ರವರಿ 14 ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ಮೇಘನಾ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಮೊನ್ನೆಯಷ್ಟೆ ಶಮಂತ್ ಬ್ರೋ ಗೌಡ ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದಿದ್ದರು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದರು.
ಶಮಂತ್ ಮೂಲತಃ ಉತ್ತರ ಕರ್ನಾಟಕದ ಹುಡುಗ. ಅವರ ಪೂರ್ತಿ ಹೆಸರು ಶಮಂತ್ ಹಿರೇಮಠ. ಮೇಘನಾ ಕುಟುಂಬಸ್ಥರು ಮರಾಠಿಗರು. ಹೀಗಾಗಿ ಎರಡೂ ಶೈಲಿ ಕೊಂಚ ಸಾಮ್ಯತೆ ಇದ್ದು, ಸಂಪ್ರದಾಯಬದ್ಧವಾಗಿ ಈ ಜೋಡಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಇವರ ಮದುವೆ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ.
ಮದುವೆಗೂ ಮುನ್ನ ನಡೆದ ಅದ್ಧೂರಿ ರಿಸೆಪ್ಶನ್ಗೆ ಕನ್ನಡ ಕಿರುತೆರೆ ನಟ, ನಟಿಯರು, ಗಾಯಕರು, ಸ್ಯಾಂಡಲ್ವುಡ್ ಸ್ಟಾರ್ಗಳು ಆಗಮಿಸಿ ನವ ಜೋಡಿ ಶುಭ ಹಾರೈಸಿದ್ದಾರೆ. ಆಲ್ ಓಕೆ, ನಟಿ ಮೌನ ಗುಡ್ಡೆಮನೆ, ಭಾಗ್ಯಲಕ್ಷ್ಮೀ ಸೀರಿಯಲ್ ಖ್ಯಾತಿಯ ಗುಂಡಣ್ಣ ಅಲಿಯಾಸ್ ನಿಹಾರ್ ಹಾಗೂ ತನ್ವಿ ಅಲಿಯಾಸ್ ನಟಿ ಅಮೃತಾ ಗೌಡ ಸೇರಿದಂತೆ ಸ್ಟಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು.
ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬ್ರೋ ಗೌಡ ಅವರ ಚೊಚ್ಚಲ ಧಾರಾವಾಹಿಯಾಗಿತ್ತು. ಮೊದಲ ಧಾರಾವಾಹಿಯಲ್ಲೇ ಅದ್ಭುತವಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು ಶಮಂತ್. ಮದುವೆ ಜೊತೆಗೆ ಶಮಂತ್ಗೆ ಇತ್ತೀಚೆಗಷ್ಟೆ ಮತ್ತೊಂದು ಬಂಪರ್ ಆಫರ್ ಕೂಡ ಬಂದಿದೆಯಂತೆ. ಮೊದಲ ಧಾರಾವಾಹಿ ಮುಕ್ತಾಯವಾದ ಬೆನ್ನಲ್ಲೇ ಅವರ ಅದೃಷ್ಟ ಬದಲಾಗಿದ್ದು ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ. ತೆಲುಗಿನ ಹೊಸ ಧಾರಾವಾಹಿಯೊಂದಕ್ಕೆ ನಾಯಕನಾಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ.