ಸಮಗ್ರ ನ್ಯೂಸ್: ಬಂಟ್ವಾಳದ ಪಾಣೆ ಮಂಗಳೂರಿನ ಅಕ್ಕರಂಗಡಿಯಲ್ಲಿ ತಂಡವೊಂದು ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಯುಧದಿಂದ ದಾಳಿ ನಡೆಸಿದ್ದು, ಕೈಗೆ ಗಂಭೀರ ಸ್ವರೂಪದ ಗಾಯವಾಗಿದೆ ಎನ್ನಲಾಗಿದೆ. ಮಂಗಳೂರಿಗೆ ಸಿಎಂ ಭೇಟಿ ನೀಡಿದ ಬೆನ್ನಲ್ಲೇ ಈ ಕೃತ್ಯ ನಡೆದಿರುವುದು ಆಘಾತ ಮೂಡಿಸಿದೆ.
ಅಕ್ಕರಂಗಡಿ ನಿವಾಸಿ ಹಮೀದ್ ಯಾನೆ ಅಮ್ಮಿ ದಾಳಿಗೊಳಗಾದ ವ್ಯಕ್ತಿಯಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ರಸ್ತೆ ಬದಿ ನಿಂತಿದ್ದ ವೇಳೆ ಬೈಕಿನಲ್ಲಿ ಬಂದ ನಾಲ್ವರ ತಂಡ ದಾಳಿ ನಡೆಸಿದೆ ಎನ್ನಲಾಗಿದೆ. ಹಮೀದ್ ಅವರು ಪೈಂಟಿಂಗ್ ವೃತ್ತಿ ನಿರ್ವಹಿಸುತ್ತಿದ್ದು, ದಾಳಿ ಯಾರು ನಡೆಸಿದ್ದಾರೆ, ಕಾರಣ ಏನು ಎಂಬುದು ಸ್ಪಷ್ಟಗೊಂಡಿಲ್ಲ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಒಂದೇ ಕೋಮಿಗೆ ಸಂಬಂಧಿಸಿದ ವಿಚಾರದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ವಿಚಾರ ಸ್ಪಷ್ಟಗೊಂಡಿಲ್ಲ. ಹಮೀದ್ ಒಬ್ಬರೇ ಇರುವ ವೇಳೆ ದಾಳಿ ನಡೆದಿದೆ ಎನ್ನಲಾಗಿದ್ದು, ಕಳೆದ ಕೆಲ ಸಮಯದ ಹಿಂದೆ ಪಾಣೆಮಂಗಳೂರು ನೆಹರೂ ನಗರದ ಬಳಿ ನಡೆದ ಇರಿತ ಪ್ರಕರಣದ ಮುಂದುವರಿದ ಭಾಗವಾಗಿರುವ ಅನುಮಾನಗಳಿವೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇದ್ದು, ಆತನ ವಿವರ ಲಭ್ಯವಾಗಿಲ್ಲ. ದಾಳಿಯಲ್ಲಿ ಗಾಯಗೊಂಡಿರುವ ಹಮೀದ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸುಹಾಸ್ ಶೆಟ್ಟಿ ಹತ್ಯೆಯಿಂದ ಭುಗಿಲೆದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಮತ್ತೆ ಈ ದುರ್ಘಟನೆ ನಡೆದಿದೆ. ಯಾವ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.