ರಾಜ್ಯದಲ್ಲಿ ಅಬ್ಬರಿಸಿದ ಮುಂಗಾರು ಪೂರ್ವ ಮಳೆ| ಒಂದೇ ದಿನ ಸಿಡಿಲಿಗೆ 9 ಮಂದಿ ಬಲಿ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ನಿನ್ನೆ ಒಂದೇ ದಿನ ಸಿಡಿಲಿಗೆ 9 ಮಂದಿ ಬಲಿಯಾಗಿದ್ದಾರೆ.

Ad Widget .

ಬಳ್ಳಾರಿ, ವಿಜಯಪುರ ಹಾಗೂ ಹಾವೇರಿಯ ತಲಾ ಇಬ್ಬರು, ರಾಯಚೂರು, ಕೊಪ್ಪಳ, ಚಿಕ್ಕಮಗಳೂರಿನ ತಲಾ ಒಬ್ಬರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರವಿಯಲ್ಲಿ ಒಂದೇ ಕುಟುಂಬದ ಮೂವರು, ಹಾವೇರಿಯಲ್ಲಿ ಇಬ್ಬರು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ, ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಗೆದ್ಲೆಹಳ್ಳಿ ಹಾಗು ಗದಗದಲ್ಲಿ ಒಬ್ಬೊಬ್ಬರು ಸಿಡಿಲು ಬಡಿದು ಸಾವನಪ್ಪಿದ್ದಾರೆ.

Ad Widget . Ad Widget .

ಧಾರವಾಡದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಮನಸೂರು ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನಿಂತಿದೆ. ಇದರಿಂದ ಸಂಚಾರ ಸ್ಥಗಿತಗೊಂಡಿದೆ. 3 ಕಿಮೀಟರ್​ವರೆಗೆ ಟ್ರಾಫಿಕ್​ಜಾಮ್ ಆಗಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಕುರಿಗಾಹಿಗಳು ಬಲಿಯಾಗಿದ್ದಾರೆ. ಬೀರಪ್ಪ (45), ಸುನೀಲ (26), ವಿನೋದ್​ (14) ಮೃತ ದುರ್ದೈವಿಗಳು. ಕುರಿ ಮೇಯಿಸಲು ತೆರಳಿದ್ದಾಗ ಜೋರು ಮಳೆ ಬಂದಿದೆ. ಈ ವೇಳೆ, ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ಸಿರಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕುಡಪಲಿ ಗ್ರಾಮದ ರೈತ ಸುನೀಲ ಕಾಳೇರ (29), ಹಾನಗಲ್ಲ ತಾಲೂಕಿನ ಕೊಂಡೋಜಿ ಗ್ರಾಮದಲ್ಲಿ ವೃದ್ಧೆ ಮರಿಯಮ್ಮ ನಾಯ್ಕರ್‌ (60) ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿದ್ದಾರೆ. ಮಲ್ಲಪ್ಪ ತಾಳಿಕೋಟೆ (47) ಮೃತ ದುರ್ದೈವಿ. ಮಲ್ಲಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದಲ್ಲಿ ರೈತ ಸಿದ್ದಪ್ಪ ಉಂಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿದೆ. ಮುದ್ದೇಬಿಹಾಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ರೈತನೊಬ್ಬ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹುಲಿಹೈದರ ಗ್ರಾಮದಲ್ಲಿ ಯಂಕಪ್ಪ ಜಾಡಿ (45) ಮೃತ ದುರ್ದೈವಿ. ಇದೇ ವೇಳೆ ಎರಡು ಎತ್ತುಗಳೂ ಸಹಿತ ಮೃತಪಟ್ಟಿವೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾರಟಗಿ ತಾಲೂಕಿನ ಮೈಲಾಪೂರ ಗ್ರಾಮದ ರೈತ ಬಸವನಗೌಡ ಮಾಲಿ ಪಾಟೀಲ್‌ (39) ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಸಿಡಿಲು ಬಡಿದ ಪರಿಣಾಮ ಕುರಿಗಾಹಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಕುರಿಗಳ ಕಾಯುತ್ತಿದ್ದ ಲೋಕೇಶಪ್ಪ (48) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯು ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹರ್ವಾಪೂರ ಗ್ರಾಮದಲ್ಲಿ ರೈತನೊಬ್ಬ ಮಂಗಳವಾರ ಸಂಜೆ ಹೊಲದಲ್ಲಿ ಟ್ರ್ಯಾಕ್ಟರ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ನಿಂಗಣ್ಣ (35) ಮೃತಪಟ್ಟ ಘಟನೆ ನಡೆದಿದೆ. ಈ ವೇಳೆ ಎತ್ತು ಕೂಡ ಮೃತಪಟ್ಟಿದ್ದು ಹಾಗೂ ನಾಲ್ವರು ಮಕ್ಕಳು ಮೂರ್ಛೆ ಹೋಗಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇನ್ನೂ ತಲೆಖಾನ ಗ್ರಾಪಂ‌ ವ್ಯಾಪ್ತಿಯ ಇಬ್ಬರು ರೈತ ಮಹಿಳೆಯರು ಸಿಡಿಲಿಗೆ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಶಾಸಕ ಆರ್.ಬಸನಗೌಡ ತುರವಿಹಾಳ ಆಸ್ಪತ್ರೆಗೆ ಭೇಟಿ ‌ನೀಡಿ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ವೀಳ್ಯದೆಲೆ ತೋಟಗಳಿಗೆ ಹಾನಿಯಾಗಿದೆ. ಶಿವಮೊಗ್ಗದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ಬೀದರ್‌, ಧಾರವಾಡದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ತತ್ತರಿಸಿದೆ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ. ಮೈಸೂರು, ಚಾಮರಾಜನಗರ, ಕೋಲಾರ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ, ಟ್ರಾಫಿಕ್‌ಜಾಮ್‌
ಬೆಂಗಳೂರಿನಲ್ಲಿ ಸುರಿದ ಗುಡುಗು, ಗಾಳಿ ಸಹಿತ ಭಾರಿ ಮಳೆಗೆ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್, ಮೈತ್ರಿ ಸರ್ಕಲ್, ವಿಧಾನಸೌಧ, ಶಿವಾನಂದ ಸರ್ಕಲ್, ಕೆ.ಆರ್. ಸರ್ಕಲ್ ಸುತ್ತಮುತ್ತ ಮಳೆಯಾಗುತ್ತಿದೆ. ಮಳೆ ಹಿನ್ನೆಲೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿದೆ.

ಬಿಎಂಟಿಸಿ ಬಸ್​ಗೆ ನುಗ್ಗಿದ ಮಳೆ ನೀರು
ಮಾನ್ಯತಾ ಟೆಕ್ ಪಾರ್ಕ್ ಬಳಿ ಬಿಎಂಟಿಸಿ ಬಸ್ ಒಳಗೆ ಮಳೆ ನೀರು ನುಗ್ಗಿದೆ. ಭಾರಿ ಮಳೆಯಿಂದ ರಸ್ತೆ ಜಲಾವೃತಗೊಂಡಿದ್ದು, ರಸ್ತೆಯಿಂದ ಬಸ್ ಒಳಭಾಗಕ್ಕೆ ಮಳೆ ನೀರು ಹರಿದಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಸಿಡಿಲು, ಮಿಂಚು ಸಹಿತ ಉತ್ತಮ ಮಳೆಯಾಗಿದೆ.

Leave a Comment

Your email address will not be published. Required fields are marked *