ಸಮಗ್ರ ನ್ಯೂಸ್: ಭಾರತ-ಪಾಕ್ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಐಪಿಎಲ್ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
ನಿನ್ನೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ 10 ಓವರ್ಗೆ ಸ್ಥಗಿತಗೊಂಡಿತು. ಇದಕ್ಕೆ ಕಾರಣ ಪಾಕಿಸ್ತಾನ ನಡೆಸಿದ ದಾಳಿ. ಭದ್ರತಾ ಕಾರಣಗಳಿಂದ ನಡೆಯುತ್ತಿದ್ದ ಪಂದ್ಯವನ್ನು ಕೂಡಲೇ ಲೈಟ್ ಆಫ್ ಮಾಡುವ ಮೂಲಕ ರದ್ದುಗೊಳಿಸಲಾಯಿತು. ಕೆಲವು ಸಮಯ ಸ್ಟೇಡಿಯಂನಲ್ಲಿಯೇ ಕಾದ ಕ್ರಿಕೆಟ್ ಪ್ರಿಯರು, ಪಂದ್ಯ ಮತ್ತೆ ಶುರುವಾಗಬಹುದು ಎಂದು ನಿರೀಕ್ಷಿಸಿದರು. ಆದ್ರೆ, ಪಂದ್ಯ ಇಲ್ಲಿಗೆ ರದ್ದಾಗಲಿದ್ದು, ಮುಂದುವರಿಯುವುದಿಲ್ಲ ಎಂದು ಸ್ಪಷ್ಟನೆ ನೀಡಲಾಯಿತು.
ಪಾಕಿಸ್ತಾನದಿಂದ ಯಾವುದೇ ದಾಳಿಯ ಸಾಧ್ಯತೆ ಇಲ್ಲದಿದ್ದರೂ ಸಹ ಭಾರತದಲ್ಲಿರುವ ಉಗ್ರರ ಬೆಂಬಲಿಗರು, ಭಯೋತ್ಪಾದಕರ ಬಗ್ಗೆ ಅನುಕಂಪಹೊಂದಿರುವವರು ಹಾಗೂ ಪಾಕಿಸ್ತಾನದ ಪರವಾಗಿ ನಿಲ್ಲುವವರು ಭಯೋತ್ಪಾದಕ ದಾಳಿಯನ್ನು ನಡೆಸಬಹುದೆಂದು ಈ ಕ್ರಮ ವಹಿಸಲಾಗಿದೆ.
ಈಗಾಗಲೇ ಸೂಕ್ಷ್ಮ ಪ್ರದೇಶಗಳಾದ ಜಲಾನಯನ ಪ್ರದೇಶಗಳು, ಅಣೆಕಟ್ಟುಗಳು, ಅಣುಸ್ಥಾವರಗಳು ಮುಂತಾದ ಪ್ರದೇಶಗಳ ಮೇಲೆ ಭಾರತ ಬಿಗಿ ಭದ್ರತೆ ನಿಯೋಜಿಸಿದೆ. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿ ದೇಶದೊಳಗೇ ಇರುವ ಉಗ್ರರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮುಂಜಾಗರೂಕತಾ ಕ್ರಮವಾಗಿ ಬಿಸಿಸಿಐ ಐಪಿಎಲ್ ಕ್ರೀಡಾಕೂಟದ ಸ್ಥಗಿತಗೊಳಿಸಲು ಚಿಂತನೆ ನಡೆಸಿದೆಯೆನ್ನಲಾಗಿದೆ.