ಸಮಗ್ರ ನ್ಯೂಸ್: ಜೀವನದ ಸುಂದರ ಕ್ಷಣಗಳನ್ನು ಅನಭವಿಸಲು ಕಾಶ್ಮೀರಕ್ಕೆ ಬಂದಿದ್ದ ಭಾರತದ 26 ಅಮಾಯಕ ಪ್ರವಾಸಿಗರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು, ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಮೇ 7 ರ ಬುಧವಾರ ಮುಂಜಾನೆ 1:44ಕ್ಕೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ.
ಪಾಕಿಸ್ತಾನದ ಒಟ್ಟು ಒಂಬತ್ತು ಸ್ಥಳಗಳಾದ ಬಹವಾಲ್ಪುರ್, ಮುರಿಡ್ಕೆ, ಗುಲ್ಪುರ್, ಭಿಂಬರ್, ಚಕ್ ಅಮ್ರು, ಬಾಗ್, ಕೋಟ್ಲಿ, ಸಿಯಾಲ್ಕೋಟ್ ಮತ್ತು ಮುಜಫರಾಬಾದ್ ಮೇಲೆ ನಿಖರವಾದ ದಾಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕ್ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಭಾರದ ದಾಳಿಯಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 6 ಸ್ಥಳಗಳು ದಾಳಿಗೊಳಗಾಗಿವೆ. ಇನ್ನು ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇಂಡಿಯನ್ ಆರ್ಮಿ “ನ್ಯಾಯದಾನ ಆಗಿದೆ.. ಜೈ ಹಿಂದ್ ಎಂದು ಬರೆದುಕೊಂಡಿದೆ “
“ಆಪರೇಷನ್ ಸಿಂಧೂರ್ ” – ಇದೇ ಹೆಸರು ಏಕೆ?
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಏಕಾಏಕಿ ದಾಳಿಯಲ್ಲಿ ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ಮಳೆಗೈದು ಹತ್ಯೆ ಮಾಡಲಾಗಿತ್ತು. ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು
ಈ ಉಗ್ರಕ್ರಿಮಿಗಳ ದಾಳಿಯಲ್ಲಿ ಶಿವಮೊಗ್ಗದ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸೇರಿದಂತೆ ಪಹಲ್ಗಾಮ್ ಪೈಶಾಚಿಕ ದಾಳಿಯಲ್ಲಿ ಬೆಂಗಳೂರಿನ ಮತ್ತಿಕೆರೆಯಲ್ಲಿ ವಾಸವಾಗಿದ್ದ ಭರತ್ ಭೂಷಣ್ (41) ಹಾಗೂ ಬೆಂಗಳೂರಿನ ಮಧುಸೂದನ್ ಸೋಮಿಶೆಟ್ಟಿ ಎಂಬ ಮೂವರು ಕನ್ನಡಿರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಈ ಆಗಂತುಕರ ದಾಳಿಗೆ ಒಟ್ಟು 26 ಮಂದಿಯ ಜೀವ ಹೋಗಿತ್ತು.
ಕರ್ನಾಟಕದವರ ಪಾಡು ಒಂದಾದರೆ ಆಗಷ್ಟೇ ಮದುವೆಯಾಗಿ ಹನಿಮೂನ್‌ಗೆಂದು ಕಾಶ್ಮೀರಕ್ಕೆ ಬಂದಿದ್ದ ಉತ್ತರ ಪ್ರದೇಶದ ಕಾನ್ಪುರ ಮೂಲದ ಶುಭಂ ದ್ವಿವೇದಿ ದಾರುಣವಾಗಿ ಸಾವನ್ನಪ್ಪಿದ್ದರು.
ಇದೇ ದಾಳಿಯಲ್ಲಿ ವಾಯುಸೇನೆ ಅಧಿಕಾರಿ ವಿನಯ್ ನರವಾಲ್ ಸಾವನ್ನಪ್ಪಿದ್ದರು. ಕೈ ತುಂಬಾ ಬಳೆ ತೊಟ್ಟು ತನ್ನ ಗಂಡನ ಶವದ ಮುಂದೆ ಕಂಗೆಟ್ಟು ಕುಳಿತಿದ್ದ ವಿನಯ್ ಪತ್ನಿ ಹಿಮಾನ್ಶಿಯ ಫೋಟೋ ಪಹಲ್ಗಾಮ್ ದಾಳಿಯ ಕ್ರೂರತೆಗೆ ಸಾಕ್ಷಿಯೆಂಬಂತೆ ಎಲ್ಲರನ್ನೂ ಕಾಡುತ್ತಿದೆ.
ಇಡೀ ಘಟನೆಯಲ್ಲಿ ಯಾವೊಬ್ಬ ಹೆಣ್ಣುಮಗಳನ್ನೂ ಕೊಲ್ಲದ ಉಗ್ರಗಾಮಿಗಳು ಕುಟುಂಬದ ಗಂಡಸರನ್ನೇ ಟಾರ್ಗೆಟ್ ಮಾಡಿದ್ದರು. ಉಗ್ರರ ರಾಕ್ಷಸೀ ಕೃತ್ಯಕ್ಕೆ ನವದಂಪತಿಗಳ ಕನಸು ನುಚ್ಚು ನೂರಾಗಿದ್ದರೆ, ಹತ್ತಾರು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಪುಟಾಣಿ ಮಕ್ಕಳು ತಂದೆಯಿಲ್ಲದೇ ಜೀವನ ಎದುರಿಸುವ ಅನಿವಾರ್ಯತೆ ಬಂದಿದೆ.
ಭಯೋತ್ಪಾದಕರ ದಾಳಿಯಲ್ಲಿ ಮನೆಯೊಡೆಯನನ್ನು ಕಳೆದುಕೊಂಡ ಹೆಣ್ಣುಮಕ್ಕಳ ಹಣೆಯಲ್ಲಿನ ಸಿಂಧೂರವೂ ಅಳಿಸಿಹೋಗಿದೆ. ಹೆಣ್ಣು ಮಕ್ಕಳ ಕುಂಕುಮ ಭಾಗ್ಯ ಕಸಿದ ಉಗ್ರರ ಹೇಯ ಕೃತ್ಯದ ವಿರುದ್ಧ ಸಿಡಿದೆದ್ದ ಭಾರತ ಇದೇ ಕಾರಣಕ್ಕೆ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆಸಿದ ಪತ್ರಿದಾಳಿಗೆ “ಆಪರೇಷನ್ ಸಿಂಧೂರ್” ಎಂದು ಹೆಸರಿಡಲಾಗಿದೆಯಂತೆ!