ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಇದೀಗ ಕೇರಳ ಮೂಲದ ಸಹ ಕಲಾವಿದ ಕಪಿಲ್ ಎಂಬುವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಶೂಟಿಂಗ್ ಮುಗಿಸಿದ ಬಳಿಕ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಕಪಿಲ್ ಅವರು ತಮ್ಮ ತಂಡದವರ ಜೊತೆ ಈಜಲು ತೆರಳಿದ್ದರು. ನೀರಿನ ಆಳ ತಿಳಿಯದೇ ಅವರು ನದಿಗೆ ಇಳಿದರು. ಈ ವೇಳೆ ಅವರು ಮುಳುಗಿ ಸಾವಿಗೀಡಾಗಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡಕ್ಕೆ ಒಂದಲ್ಲ ಒಂದು ಗಂಡಾಂತರ ಎದುರಾಗುತ್ತಲೇ ಇದೆ. ದೈವ ನುಡಿದಂತೆಯೇ ಚಿತ್ರೀಕರಣಕ್ಕೆ ಹಲವು ಸಂಕಷ್ಟಗಳು ಎದುರಾಗುತ್ತಿವೆ. ಈ ಹಿಂದೆ ಕೊಲ್ಲೂರಿನಲ್ಲೇ ಜೂನಿಯರ್ ಆರ್ಟಿಸ್ಟ್ಗಳಿದ್ದ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಬಳಿಕ ಗಾಳಿ ಮಳೆಗೆ ಬೃಹತ್ ಸೆಟ್ ಹಾರಿ ಹೋಗಿತ್ತು. ಇಂಥ ಘಟನೆಗಳ ಬೆನ್ನಲ್ಲೇ ಜೂನಿಯರ್ ಆರ್ಟಿಸ್ಟ್ ದಾರುಣ ಸಾವು ಸಂಭವಿಸಿದೆ.
ಕಪಿಲ್ ನಿಧನರಾಗಿರುವುದು ‘ಕಾಂತಾರ: ಚಾಪ್ಟರ್ 1’ ತಂಡಕ್ಕೆ ನೋವುಂಟು ಮಾಡಿದೆ. ಆದರೆ ಚಿತ್ರತಂಡದ ಪ್ರಮುಖರು ಶೀಘ್ರದಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ.