ಸಮಗ್ರ ನ್ಯೂಸ್: ರಿಕ್ಷಾ ಚಾಲಕರೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಮೇ 1ರಂದು ರಾತ್ರಿ 11:15ರ ಸುಮಾರಿಗೆ ಶೇಡಿಗುಡ್ಡೆ ಬಳಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯಡ್ಕ ಬೊಮ್ಮರಬೆಟ್ಟುವಿನ ಸಂದೇಶ್ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಬಂದಿತ ಆರೋಪಿಗಳು.
ಆತ್ರಾಡಿಯ ಅಬೂಬಕರ್ (50) ಎಂಬವರು ಬಾಡಿಗೆ ನಿಮಿತ್ತ ಆತ್ರಾಡಿಯಿಂದ ಮದಗ ಕಡೆಗೆ ಮುಖ್ಯರಸ್ತೆಯಲ್ಲಿ ರಿಕ್ಷಾದಲ್ಲಿ ಆತ್ರಾಡಿ ಗ್ಯಾಸ್ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು, ರಿಕ್ಷಾವನ್ನು ಹಿಂಬಾಲಿಸುತ್ತಿದ್ದರು. ಅಲ್ಲದೆ ಅವರು ಅಬೂಬಕರ್ ಅವರಲ್ಲಿ ರಿಕ್ಷಾವನ್ನು ನಿಲ್ಲಿಸುವಂತೆ ಬೆದರಿಸಿದರೆನ್ನಲಾಗಿದೆ. ಅಲ್ಲದೇ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದು, ಅಬೂಬಕರ್ ರಿಕ್ಷಾವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಮುಂದೆ ಹೋಗಿದ್ದಾರೆ.
ಈ ವೇಳೆ ಬೈಕಿನಲ್ಲಿದ್ದ ವ್ಯಕ್ತಿಗಳ ಪೈಕಿ ಹಿಂಬದಿ ಸವಾರನ ಕೈಯಲ್ಲಿ ತಲವಾರು ಇರುವುದನ್ನು ಗಮನಿಸಿದ ರಿಕ್ಷಾ ಚಾಲಕ, ಶೇಡಿಗುಡ್ಡೆ ಬಳಿ ರೋಸ್ ಬಸ್ಸಿನವರ ಮನೆ ಬಳಿ ಇರುವ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ನಿಲ್ಲಿಸಿ ಓಡಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅಬೂಬಕರ್ ಅವರ ತಲೆಯನ್ನು ಗುರಿಯಾಗಿಸಿ ತಲವಾರು ಬೀಸಿದ್ದಾರೆ. ಆದರೆ ಅವರು ತಲವಾರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ ದುಷ್ಕರ್ಮಿಗಳು ತಮ್ಮ ಕೈಯಲ್ಲಿದ್ದ ಬಾಟಲಿಯಿಂದ ಆಟೋ ರಿಕ್ಷಾದ ಮುಂಭಾಗದ ಗ್ಲಾಸಿಗೆ ಹೊಡೆದಿರುವುದಾಗಿ ದೂರಲಾಗಿದೆ. ಅಬೂಬಕರ್ ಕೂಡಲೇ ಅಲ್ಲೇ ಪಕ್ಕದಲ್ಲಿದ್ದ ಕಂಪೌಂಡ್ ಜಿಗಿದು ಓಡಿ ಹೋಗಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.