ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಕ್ಷಿಣ ಕನ್ನಡ ರಾಜ್ಯಕ್ಕೆ ಫಸ್ಟ್ ಬಂದಿದ್ದು, ಕಲಬುರಗಿ ಜಿಲ್ಲೆಗೆ ಕೊನೆಯ ಸ್ಥಾನ ಬಂದಿದೆ.
ಸುದ್ದಿಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ರಾಜ್ಯದಿಂದ 2818 ಕೇಂದ್ರಗಳಲ್ಲಿ 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆದಿದ್ದರು.
12:30 ರಿಂದ karresults.nic.in ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ಬಾರಿ ಶೇ. 66.14 ರಷ್ಟು ಫಲಿತಾಂಶ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್ ಇದ್ದು, ಕಲಬುರಗಿ ಲಾಸ್ಟ್ ಇದೆ. ಒಟ್ಟು 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶೇಕಡಾ 62.7ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳಲ್ಲಿ ಶೇಕಡಾ 58.97ರಷ್ಟು, ಅನುದಾನರಹಿತ ಶಾಲೆಗಳಲ್ಲಿ ಶೇ.75.59ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ನಗರ ಪ್ರದೇಶದ ಶೇಕಡಾ 67.05ರಷ್ಟು ಮತ್ತು ಗ್ರಾಮೀಣ ಭಾಗದಲ್ಲಿ ಶೇಕಡಾ 65.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ.83.19), ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ (ಶೇ.82.29), ಕೊಡಗು ಜಿಲ್ಲೆಗೆ 5ನೇ ಸ್ಥಾನ (ಶೇ.82.21), ಕಲಬುರಗಿ ಕೊನೆಯ ಸ್ಥಾನ (ಶೇ42.43) ಪಡೆದುಕೊಂಡಿದೆ.
ಇಂದಿನಿಂದಲೇ ಮೇ-7 ರವರೆಗೆ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ನೀಡಲಾಗಿದೆ. ಮೇ 4 ರಿಂದ 11ನೇ ತಾರೀಖಿನವರೆಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಎಸ್‌ಎಸ್‌ಎಲ್ಸಿ ಪರೀಕ್ಷೆ-2 ಮೇ 26 ರಿಂದ ಜೂನ್ 2ರವರೆಗೆ ಮತ್ತು ಎಸ್‌ಎಸ್‌ಎಲ್ಸಿ ಪರೀಕ್ಷೆ-3 ಜೂನ್ 23 ರಿಂದ 30 ರವರೆಗೆ ನಡೆಯಲಿದೆ.