ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಬಜಪೆಯ ಕಿನ್ನಿಪದವಿನಲ್ಲಿ ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ 2 ರಿಂದ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರು ಶುಕ್ರವಾರ ಆದೇಶ ಮಾಡಿದ್ದಾರೆ.
‘ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ನಗರದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಜಾಸ್ತಿಯಾಗಿವೆ. ಹಾಗಾಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಪ್ರಕಾರ ಇದೇ 2ರ ಬೆಳಿಗ್ಗೆ 6 ರಿಂದ ಇದೇ 6 ರಂದು ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸುವಂತೆ ಕಮಿಷನರೇಟ್‌ನ ನಗರ ವಿಶೇಷ (ಗುಪ್ತ ವಾರ್ತೆ) ವಿಭಾಗದ ಇನ್ಸ್ಪೆಕ್ಟರ್ ವರದಿ ನೀಡಿದ್ದು, ಆ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಕಮಿಷನರೇಟ್ ವ್ಯಾಪ್ತಿ ಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ದೊಣ್ಣೆ, ಕತ್ತಿ, ಕೋಲು, ಬಂದೂಕು, ಚಾಕು ಸೇರಿದಂತೆ ಮನುಷ್ಯರಿಗೆ ದೈಹಿಕವಾಗಿ ಹಲ್ಲೆ ಮಾಡುವಂತಹ ಯಾವುದೇ ರೀತಿಯ ಶಸ್ತ್ರಗಳನ್ನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಆಯಸಿಡ್ ಅಥವಾ ಸ್ಫೋಟಕಗಳನ್ನು ಒಯ್ಯುವಂತಿಲ್ಲ. ವ್ಯಕ್ತಿಗಳ ಪ್ರತಿಕೃತಿ ಸುಡುವಂತಿಲ್ಲ. ಕಲ್ಲುಗಳನ್ನು ಅಥವಾ ಕ್ಷಿಪಣಿಗಳನ್ನು ಎಸೆಯುವ ಸಾಧನಗಳನ್ನು ಒಯ್ಯುವುದನ್ನು, ಶೇಖರಿಸುವುದನ್ಲನು ಅಥವಾ ತಯಾರಿಸುವುದನ್ನು ನಿಷೇಧಿಸಲಾಗಿದೆ.
ಸರ್ಕಾರಿ ಸಂಸ್ಥೆ ಅಥವಾ ಸಂಘಟನೆಗಳ ವಿರುದ್ಧ, ಕಾರ್ಯನಿರತ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ದ ನಿಂದನಾತ್ಮಕ ಘೋಷಣೆ ಕೂಗುವುದನ್ನು, ಭಾಷಣ ಮಾಡುವುದನ್ನು, ಪ್ರತಿಭಟನೆ ನಡೆಸುವುದನ್ನು, ಅವಾಚ್ಯ ಶಬ್ದ ಬಳಸುವುದನ್ನು, ಪ್ರಚೋದನಾಕಾರಿ ಭಾಷಣ ಮಾಡುವುದನ್ನು, ಗಾಯನ ಮೊದಲಾದ ಚಟುವಟಿಕೆ ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.