ಸಮಗ್ರ ನ್ಯೂಸ್: ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಉಂಟಾಗಿರುವ ಭಾರತ ಹಾಗೂ ಪಾಕ್ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ಎರಡೂ ದೇಶಗಳ ರಾಜಕಾರಣಿಗಳು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ನಿನ್ನೆ ( ಏಪ್ರಿಲ್ 26 ) ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ ಪಾಕ್ ಹಾಗೂ ಭಾರತದ ನಡುವೆ ಯುದ್ಧ ನಡೆಯಲಿದೆ ಎಂದು ಹರಿದಾಡುತ್ತಿರುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದರು.
ʼಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕಾದಂತಹ ಅಗತ್ಯ ಇಲ್ಲ. ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಷ್ಟೆ. ಭದ್ರತಾ ವ್ಯವಸ್ಥೆಯನ್ನು ಬಿಗಿ ಮಾಡುವಂತಹ ಕೆಲಸವನ್ನು ಮಾಡಬೇಕು. ಯುದ್ಧದ ಪರ ಇಲ್ಲ ನಾವು. ಶಾಂತಿ ಇರಬೇಕು, ಜನರಿಗೆ ಭದ್ರತೆ ಇರಬೇಕು, ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕುʼ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
ಈ ಹೇಳಿಕೆ ರಾಜ್ಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು ಹಾಗೂ ಇದೀಗ ಪಾಕಿಸ್ತಾನಕ್ಕೂ ಸಹ ತಲುಪಿದೆ. ಅಲ್ಲಿನ ಸುದ್ದಿ ವಾಹಿನಿಗಳು ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದು, ಸಿದ್ದರಾಮಯ್ಯನವರ ಭಾರತದ ಯುದ್ಧ ಮಾಡುವ ಅಗತ್ಯವಿಲ್ಲ, ಬದಲಾಗಿ ಭದ್ರತಾ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ಸರಿ ಇದೆ ಹಾಗೂ ಪ್ರಬುದ್ಧವಾದ ಹೇಳಿಕೆ ಎಂದು ಸಿದ್ದರಾಮಯ್ಯನವರನ್ನು ಹೊಗಳಿವೆ.
ಸಿದ್ದರಾಮಯ್ಯ ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾಗುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ ಇತ್ತ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಪಾಕ್ ಟಿವಿ ಪ್ರಸಾರ ಮಾಡಿರುವ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಟ್ವೀಟ್ ಮಾಡಿದ್ದಾರೆ.