ಸಮಗ್ರ ನ್ಯೂಸ್: KAS ಪೂರ್ವಭಾವಿ ಪರೀಕ್ಷೆಯಲ್ಲಿ ಲೋಪಗಳು ಮತ್ತು ಭಾಷಾಂತರ ದೋಷಗಳು ಪುನರಾವರ್ತನೆಯಾಗಿವೆ ಎಂದು ಪೂರ್ವಭಾವಿ ಮರುಪರೀಕ್ಷೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪತ್ರದಲ್ಲಿರುವುದೇನು?
ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ಬಹುತೇಕ ಪರೀಕ್ಷೆಗಳಲ್ಲಿ ಗೊಂದಲ, ಲೋಪಗಳು, ಭಾಷಾಂತರ ದೋಷಗಳು ಪುನರಾವರ್ತನೆಯಾಗುತ್ತಲೇ ಇರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ನಾಚಿಕೆಗೇಡಿನ ವಿಷಯವಾಗಿದೆ. ಈ ಹಿಂದೆ ಕನ್ನಡ ಭಾಷಾ ಪರೀಕ್ಷಾರ್ಥಿಗಳ ಪ್ರಶ್ನೆಪತ್ರಿಕೆಗಳನ್ನು ಸಮರ್ಪಕವಾಗಿ ಭಾಷಾಂತರಿಸದೆ ಎಡವಟ್ಟು ಮಾಡಿ ಲಕ್ಷಾಂತರ ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು”.
ಕರ್ನಾಟಕದ ಮಾತೃಭಾಷೆಯಲ್ಲಿಯೇ ದೋಷಪೂರಿತ ಪ್ರಶ್ನೆಗಳನ್ನು ನೀಡಿ ಕೆಎಎಸ್ ಪರೀಕ್ಷಾರ್ಥಿಗಳನ್ನು ಆತಂಕ ಹಾಗೂ ಗೊಂದಲಕ್ಕೆ, ದೂಡುತ್ತಿರುವ ಆಯೋಗದ ಪರಿ ಕ್ಷಮೆಗೆ ಅರ್ಹವಲ್ಲದ ನಡೆಯಾಗಿದೆ. ಸಂಬಂಧಿಸಿದವರ ಬೇಜವಾಬ್ದಾರಿತನ ಪದೇ ಪದೇ ಮರುಕಳಿಸುತ್ತಿರುವುದು ಕೆಪಿಎಸ್ಸಿ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಪೂರ್ವಬಾವಿ ಪರೀಕ್ಷೆಯಲ್ಲಿನ ಮರುಪರೀಕ್ಷೆಗೆ 2 ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆ.ಪಿ.ಎಸ್.ಸಿ. ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯ ಮಾಡಿದೆ. ಕೆ.ಪಿ.ಎಸ್.ಸಿ.ಯ ನಿರಂತರ ಎಡವಟ್ಟುಗಳನ್ನು ಸಹಿಸದೇ ಪರೀಕ್ಷಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿಂದೆ ತಾವು ಸದನದಲ್ಲಿ ಹೇಳಿದ್ದಂತೆ ನ್ಯಾಯಾಲಯದ ತೀರ್ಪು ಬಂದ ಕೂಡಲೇ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ತಿಳಿಸಿದ್ದೀರಿ” ಎಂದು ಪತ್ರದಲ್ಲಿದೆ.
ಸದ್ಯ ಘನ ನ್ಯಾಯಾಲಯ 34 ಅಭ್ಯರ್ಥಿಗಳಿಗೆ ಮರುಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿದೆ. ಆದರೆ ಉಳಿದ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ತಾವು ಗಂಭೀರವಾಗಿ ಚಿಂತಿಸಿ ಎಲ್ಲಾ ಅಭ್ಯರ್ಥಿಗಳಿಗೂ ಮರುಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು ನ್ಯಾಯೋಚಿತಕ್ರಮವಾಗುತ್ತದೆ. ಈ ನಿಟ್ಟಿನಲ್ಲಿ ತಾವು ಜರೂರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವೆ. ತಮ್ಮ ಭವ್ಯ ಭವಿಷ್ಯದ ಕನಸು ಹೊತ್ತು ಪರೀಕ್ಷೆ ಎದುರಿಸುವ ಅವಕಾಶಕ್ಕಾಗಿ ಪರಿತಪಿಸುತ್ತಿರುವ ಯುವಜನರ ನಿರೀಕ್ಷೆ ತಾವು ಹುಸಿಗೊಳಿಸುವುದಿಲ್ಲ ಎಂದು ನಂಬಿರುವೆ” ಎಂದು ಬಿವೈವಿ ಪತ್ರ ಬರೆದಿದ್ದಾರೆ.