ಸಮಗ್ರ ನ್ಯೂಸ್: ಪೆಹಗ್ಲಾಮ್ ನರಮೇಧದ ಬಳಿಕ ದೇಶದಲ್ಲಿನ ಪಾಕಿಸ್ತಾನಿಯರ ವೀಸಾ ರದ್ದುಗೊಳಿಸಿ ಪಾಕಿಸ್ತಾನಕ್ಕೆ ಮರಳಲು ಭಾರತ ಸರ್ಕಾರ ಆದೇಶ ನೀಡಿದೆ. ಆದರೆ ಕರ್ನಾಟಕದ ಭಟ್ಕಳದಲ್ಲಿ 14 ಪಾಕಿಸ್ತಾನಿಯರಿದ್ದರೂ ಅವರು ಭಾರತವನ್ನು ತೊರೆಯಬೇಕಿಲ್ಲ.
ಹೌದು, ಈ 14 ಮಂದಿ ಪಾಕಿಸ್ತಾನಿಯರು ಇಲ್ಲಿನವರನ್ನು ವಿವಾಹ ಆಗಿರುವುದರಿಂದ ಅವರು ದೇಶ ತೊರೆಯದೆ, ಇಲ್ಲೇ ವಾಸಿಸಬಹುದಾಗಿದೆ. ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗಲು 48 ಗಂಟೆ ಕೇಂದ್ರ ಸರ್ಕಾರ ಗಡುವು ನೀಡಿದೆ.
ಆದರೆ ಭಟ್ಕಳದಲ್ಲಿರುವ ಬಹುತೇಕರು ಮಹಿಳೆಯರಾಗಿದ್ದು, ಅವರನ್ನು ಸ್ಥಳೀಯರನ್ನು ವಿವಾಹವಾಗಿದ್ದು, ದೀರ್ಘಕಾಲೀನ ವೀಸಾ ಹೊಂದಿದ್ದಾರೆ. ಹೀಗಾಗಿ ಸದ್ಯಕ್ಕಂತೂ ಇವರು ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. ಪ್ರಸ್ತುತ ಭಟ್ಕಳದಲ್ಲಿ ಒಟ್ಟು 14 ಪಾಕಿಸ್ತಾನಿ ಮೂಲದವರಿದ್ದು, ಅವರಲ್ಲಿ 10 ಮಹಿಳೆಯರಾಗಿದ್ದಾರೆ, ಮೂವರು ಮಕ್ಕಳು. ಇನ್ನೊಬ್ಬ ಮಹಿಳೆ ಅಕ್ರಮ ವಲಸಿಗರಾಗಿದ್ದು, ಅವರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ಈ ಮಹಿಳೆ ಬಾಂಗ್ಲಾದೇಶದ ಮೂಲಕ ನುಸುಳಿ ಭಟ್ಕಳಕ್ಕೆ ಬಂದು ಇಲ್ಲಿ ಸಂಸಾರ ಮಾಡುತ್ತಿದ್ದು, ಆಕೆಯ ಮೇಲೆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಇಲ್ಲಿಯೇ ವಾಸವಾಗಿದ್ದಾಳೆ. ಭಟ್ಕಳಕ್ಕೂ ಹಾಗೂ ಪಾಕಿಸ್ತಾನಕ್ಕೂ ಬಹಳ ಹಿಂದಿನಿಂದಲೂ ನಂಟಿದೆ. ಇಲ್ಲಿನ ಅನೇಕರ ಸಂಬಂಧಿಗಳು ಪಾಕಿಸ್ತಾನದಲ್ಲಿ ಇರುವುದರಿಂದ ಇಂದಿಗೂ ಅವರ ಹಾಗೂ ಭಟ್ಕಳದವರ ನಡುವೆ ವೈವಾಹಿಕ ಸಂಬಂಧಗಳು ನಡೆಯುತ್ತಲೇ ಇರುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪಾಕಿಸ್ತಾನದಿಂದ ಒಟ್ಟು 4 ಜನರು ಸಂದರ್ಶನ ವೀಸಾದಲ್ಲಿ ಬಂದು ಹೋಗಿದ್ದಾರೆ. ಆದರೆ, ಸದ್ಯ ಪಾಕಿಸ್ತಾನದಿಂದ ಪ್ರವಾಸಿ ವೀಸಾದೊಂದಿಗೆ ಬಂದಿದ್ದ ಪ್ರಜೆಗಳು ಯಾರೂ ಇಲ್ಲ ಎಂದು ತಿಳಿದು ಬಂದಿದೆ.